ಯುವತಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್- ಮತಾಂತರಕ್ಕೆ ಒಪ್ಪದ್ದಕ್ಕೆ ಕೊಲೆ, ಲವ್ ಜಿಹಾದ್ ಎಂದ ಪೋಷಕರು

– ವಿವಾಹವಾಗಿ, ಮತಾಂತರವಾಗುವಂತೆ ಒತ್ತಡ
– ಯುವತಿ ಒಪ್ಪದ್ದಕ್ಕೆ ಅಪಹರಣಕ್ಕೆ ಯತ್ನ, ತಪ್ಪಿಸಿಕೊಂಡಿದ್ದಕ್ಕೆ ಗುಂಡೇಟು

ಚಂಡೀಗಢ: 21 ವರ್ಷದ ಯುವತಿ ಪರೀಕ್ಷೆ ಬರೆದು ಹೊರಗೆ ಬರುತ್ತಿದ್ದಂತೆ ಏಕಾಏಕಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ ಪ್ರಕರಣ ಇದೀಗ ದೇಶಾದ್ಯಂತ ತಲ್ಲಣ ಸೃಷ್ಟಿಸಿದ್ದು, ಇದು ಲವ್ ಜಿಹಾದ್ ಎಂದು ಯುವತಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಹರಿಯಾಣದ ಫರಿದಾಬಾದ್ ನಲ್ಲಿ ಘಟನೆ ನಡೆದಿದ್ದು, ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಪರೀಕ್ಷೆ ಮುಗಿಸಿ ಕಾಲೇಜಿನಿಂದ ಹೊರಗೆ ಬರುತ್ತಿದ್ದಂತೆ ದುರುಳರು ಆಕೆಯ ಮೇಲೆ ದಾಳಿ ನಡೆಸಿದ್ದಾರೆ. ಆರಂಭದಲ್ಲಿ ಅಪಹರಿಸಲು ಮುಂದಾಗಿದ್ದು, ಈ ವೇಳೆ ಯುವತಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಗ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಇದೀಗ ಟ್ವಿಸ್ಟ್ ಪಡೆದುಕೊಂಡಿದೆ. ಮತಾಂತರಗೊಂಡು ವಿವಾಹವಾಗುವಂತೆ ಆರೋಪಿ ಬಲವಂತ ಮಾಡಿ, ಬೆದರಿಕೆ ಹಾಕಿದ್ದ. ಇದು ಲವ್ ಜಿಹಾದ್ ಎಂದು ಯುವತಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಪರೀಕ್ಷೆ ಮುಗಿಸಿ ಹೊರಬರುತ್ತಿದ್ದಂತೆಯೇ ಗುಂಡಿಕ್ಕಿ ಯುವತಿಯ ಕೊಲೆ

ಸೋಮವಾರ ಮಧ್ಯಾಹ್ನ ಘಟನೆ ನಡೆದಿದ್ದು, ಯುವತಿ ನಿಖಿತಾ ತೋಮರ್ ಬಿ.ಕಾಂ ಅಂತಿಮ ವರ್ಷದ ಪರೀಕ್ಷೆ ಬರೆದು ಕಾಲೇಜಿನಿಂದ ಹೊರಗೆ ಬರುತ್ತಿದ್ದಂತೆ ಆರೋಪಿಗಳು ದಾಳಿ ಮಾಡಿದ್ದಾರೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಘಟನೆ ನಡೆಯುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಗಾಯಗಳಾಗಿದ್ದರಿಂದ ಸಾವನ್ನಪ್ಪಿದ್ದಾಳೆ ಎಂದು ಬಲ್ಲಬ್‍ಘರ್ ಎಸಿಪಿ ಜೈವೀರ್ ಸಿಂಗ್ ರಥಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ತೌಸಿಫ್ ಹಾಗೂ ಆತನ ಸಹಚರನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.

ಘಟನೆ ಕುರಿತು ಯುವತಿಯ ಕುಟುಂಬಸ್ಥರು ಮೌನ ಮುರಿದಿದ್ದು, ಆರೋಪಿ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದು, ತನ್ನ ಧರ್ಮಕ್ಕೆ ಮತಾಂತರವಾಗುವಂತೆ ಮೂರು ವರ್ಷದಿಂದ ಯುವತಿಗೆ ಬಲವಂತ ಮಾಡಿ, ಒತ್ತಡ ಹೇರಿದ್ದ. ಯುವತಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವುದನ್ನು ನಿರಾಕರಿಸಿದ್ದಕ್ಕೆ ಆರೋಪಿ ಅಪಹರಿಸಲು ಯತ್ನಿಸಿದ್ದಾನೆ. ಈ ವೇಳೆ ಯುವತಿ ತಪ್ಪಿಸಿಕೊಂಡಿದ್ದು, ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಆರೋಪಿಗಳು ಕಾರಿನಲ್ಲಿ ಆಗಮಿಸಿದ್ದು, ಯುವತಿಯನ್ನು ಸಹ ಕಾರಿನಲ್ಲಿ ಕೂರುವಂತೆ ಬಲವಂತ ಮಾಡಿದ್ದಾರೆ. ಆದರೆ ಆಕೆ ನಿರಾಕರಿಸಿದ್ದಾಳೆ. ಈ ವೇಳೆ ಗುಂಡು ಹಾರಿಸಿದ್ದಾರೆ. ಅಲ್ಲದೆ ನಾನು ಈ ಕುರಿತು 2018 ರಲ್ಲೇ ಆರೋಪಿ ತೌಸಿಫ್ ವಿರುದ್ಧ ಕಿರುಕುಳದ ದೂರು ನೀಡಿದ್ದೆ ಎಂದು ಯುವತಿಯ ತಂದೆ ಹೇಳಿದ್ದಾರೆ.

ಈ ಕುರಿತು ಸ್ವತಃ ನಿಖಿತಾ ತಂದೆ ಬಳಿ ಹೇಳಿದ್ದು, ಆರೋಪಿ ನನ್ನನ್ನು ಅಪಹರಿಸಲು ಬಂದಿದ್ದ ಎಂದು ತಿಳಿಸಿರುವುದಾಗಿ ಅವರ ತಂದೆ ಹೇಳಿದ್ದಾರೆ. ನಾನು ದೂರು ನೀಡಿದ್ದಕ್ಕೆ ತೌಸಿಫ್ ನನ್ನ ಮಗಳ ಮೇಲೆ ಒತ್ತಡ ಹೇರಿದ್ದ. ಅಲ್ಲದೆ ದೂರನ್ನು ವಾಪಸ್ ಪಡೆಯುವಂತೆ ಕುಟುಂಬದ ಮೇಲೆ ತುಂಬಾ ಒತ್ತಡ ಹೇರಿದ್ದ, ಹೀಗಾಗಿ ದೂರು ವಾಪಸ್ ಪಡೆಯಲಾಗಿತ್ತು ಎಂದು ತಿಳಿಸಿದ್ದಾರೆ.

ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ನಿಖಿತಾ ಆರೋಪಿಯ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಹಾಗೂ ಕರೆಗಳನ್ನು ಸ್ವೀಕರಿಸದ್ದಕ್ಕೆ ತೌಸಿಫ್ ತುಂಬಾ ಸಿಟ್ಟಿಗೆದ್ದಿದ್ದ. ಬಳಿಕ ನಿಖಿತಾ ಪರೀಕ್ಷೆ ಬರೆಯಲು ಕಾಲೇಜಿಗೆ ಆಗಮಿಸುತ್ತಾಳೆ ಎಂಬುದನ್ನು ಅರಿತಿದ್ದ ತೌಸಿಫ್, ಕಾರ್ ತೆಗೆದುಕೊಂಡು ಬಂದು ಸ್ನೇಹಿತರೊಂದಿಗೆ ಕಾಲೇಜ್ ಹೊರಗೆ ನಿಂತಿದ್ದ. ಬಳಿಕ ದಾಳಿ ಮಾಡಿದ್ದಾನೆ.

ಪ್ರಕರಣವನ್ನು ಪೊಲೀಸರು ಅಪರಾಧ ವಿಭಾಗಕ್ಕೆ ವರ್ಗಾಯಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಪ್ರಕರಣವನ್ನು ಬಿಜೆಪಿ ವಕ್ತಾರ ರಮಣ್ ಮಲಿಕ್ ಖಂಡಿಸಿದ್ದು, ಇದು ಜಿಹಾದಿ ರೀತಿಯ ಚಟುವಟಿಕೆಯಾಗಿದೆ. ಪೊಲೀಸರು ಎಲ್ಲ ಸಂದರ್ಭದಲ್ಲೂ, ಎಲ್ಲ ಕಡೆಯೂ ಇರಲು ಸಾಧ್ಯವಿಲ್ಲ ಎಂದಿದ್ದಾರೆ. ಅಗರ್ವಾಲ್ ಕಾಲೇಜು ಬಳಿ, ಪ್ರಕರಣ ನಡೆದ ಸ್ಥಳದಲ್ಲಿ ನಿಖಿತಾ ಸ್ನೇಹಿತರು ಹಾಗೂ ಇತರರು ಪ್ರತಿಭಟನೆ ನಡೆಸುತ್ತಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದರಿಂದಾಗಿ ಹೈವೇ ಸಂಪೂರ್ಣ ಬಂದ್ ಆಗಿದ್ದು, ಪಲ್ಲಾಭ್‍ಘರ್-ಸಿಹ್ನಾ ರಸ್ತೆ ಬಂದ್ ಆಗಿದೆ. ಸಾಕಷ್ಟು ಟ್ರಾಫಿಕ್ ಜಾಮ್ ಸಂಭವಿಸಿದೆ.

Comments

Leave a Reply

Your email address will not be published. Required fields are marked *