ಯುಎಇಯಿಂದ 52 ಮಂದಿ ಉಡುಪಿಗೆ ಆಗಮನ- 9 ಮಂದಿ ಸರ್ಕಾರಿ ಕ್ವಾರಂಟೈನ್

– ಉಳಿದವರು ಹೊಟೇಲ್ ಲಾಡ್ಜ್ ಗೆ ಶಿಫ್ಟ್

ಉಡುಪಿ: ವಿದೇಶಗಳಲ್ಲಿ ಸಿಲುಕಿಕೊಂಡ ಭಾರತೀಯರನ್ನು ಕಳೆದ ಐದು ದಿನಗಳಿಂದ ಭಾರತಕ್ಕೆ ವಾಪಸ್ ಕರೆತರಲಾಗುತ್ತಿದೆ. ಯುನೈಟೆಡ್ ಅರಬ್ ಎಮಿರೇಟ್ಸಿಂದ ಉಡುಪಿಗೆ 52 ಪ್ರಯಾಣಿಕರು ವಾಪಸ್ಸಾಗಿದ್ದಾರೆ.

ಮಂಗಳವಾರ ರಾತ್ರಿ 176 ಪ್ರಯಾಣಿಕರು ಮಂಗಳೂರು ಏರ್ ಪೋರ್ಟಿಗೆ ಬಂದಿಳಿದಿದ್ದು , ಈ ಪೈಕಿ 52 ಜನರು ವಿಮಾನ ನಿಲ್ದಾಣದಲ್ಲಿನ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿ ಉಡುಪಿ ಜಿಲ್ಲೆಗೆ ಬಂದಿದ್ದಾರೆ. ಈ ಪೈಕಿ 27 ಮಂದಿ ಪುರುಷರು ಮತ್ತು 26 ಮಂದಿ ಮಹಿಳೆಯರಿದ್ದಾರೆ. 41 ಜನ ಹೋಟೆಲ್, ಲಾಡ್ಜಿಂಗ್ ಕ್ವಾರಂಟೈನ್ ಗೆ ಒಳಪಟ್ಟರೆ, 9 ಜನ ಸರ್ಕಾರಿ ಕ್ವಾರಂಟೈನ್ ಗೆ ಸೇರ್ಪಡೆಯಾಗಿದ್ದಾರೆ.

ಆಯಾಯ ತಾಲೂಕಲ್ಲಿ ನೋಂದಣಿ ಮಾಡಿ ತಮ್ಮ ಇಚ್ಛೆಯಂತೆ ಕ್ವಾರಂಟೈನ್ ಮಾಡಲಾಗುತ್ತದೆ. ಪೊಲೀಸ್ ಭದ್ರತೆ ಕೊಡಲಾಗಿದೆ. ಸಂಬಂಧಿಕರು ಭೇಟಿಯಾಗುವಂತಿಲ್ಲ ಎಂದು ಕಡ್ಡಾಯವಾಗಿ ತಾಕೀತು ಮಾಡಲಾಗಿದೆ. ಉಡುಪಿ ತಾಲೂಕಿನ 12, ಕುಂದಾಪುರ ತಾಲೂಕಿನ 14, ಬೈಂದೂರು ತಾಲೂಕಿನ 5, ಕಾಪು ತಾಲೂಕಿನ 16, ಕಾರ್ಕಳ ತಾಲೂಕಿನ ಮೂವರು ಮತ್ತು ಬ್ರಹ್ಮಾವರ ತಾಲೂಕಿನ ಮೂವರು ಸೇರಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯ ತಪಾಸಣಾ ತಂಡದಿಂದ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಪ್ರಯಾಣಿಕರ ಕೈಗೆ ಸೀಲ್ ಹಾಕಲಾಯಿತು. ಬಳಿಕ ತಡರಾತ್ರಿ 3 ಗಂಟೆ ಸುಮಾರಿಗೆ ಉಡುಪಿ ಜಿಲ್ಲೆಯ 52 ಮಂದಿಯನ್ನು ಬಸ್ಸುಗಳಲ್ಲಿ ನೇರವಾಗಿ ಉಡುಪಿಗೆ ಕರೆತರಲಾಯಿತು. ವಿಮಾನದಲ್ಲಿ ಆಗಮಿಸಿದ ಜಿಲ್ಲೆಯ ಎಲ್ಲ ಪ್ರಯಾಣಿಕರು ಉಡುಪಿ ನಗರದ ಬೋರ್ಡ್ ಹೈಸ್ಕೂಲ್ ಆವರಣದಲ್ಲಿರುವ ಸ್ವೀಕಾರ ಕೇಂದ್ರದಲ್ಲಿ ಜಮಾವಣೆಯಾದರು.

ಕುಂದಾಪುರ ಭೂ ದಾಖಲೆಗಳ ಸಹಾಯಕ ನಿರ್ದೇಶಕ ರವೀಂದ್ರ, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಕಂದಾಯ, ಸರ್ವೇ ಇಲಾಖಾ ಸಿಬ್ಬಂದಿ ವಿದೇಶದಿಂದ ಬಂದರನ್ನು ಕ್ವಾರಂಟೈನ್ ಮಾಡಿದರು.

Comments

Leave a Reply

Your email address will not be published. Required fields are marked *