ಯಾರ್ಯಾರಿಗೆ ಕೊರೊನಾ ಲಸಿಕೆ ಸಿಗುತ್ತೆ- ರಾಹುಲ್ ಗಾಂಧಿ ಪ್ರಶ್ನೆ

RAHUL GANDHI

– ನಿಲುವು ತಿಳಿಸುವಂತೆ ಪ್ರಧಾನಿ ಮೋದಿಗೆ ಟ್ವೀಟ್

ನವದೆಹಲಿ: ಕೊರೊನಾ ಲಸಿಕೆ ಯಾರ್ಯಾರಿಗೆ ಸಿಗುತ್ತೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಿಲುವು ಏನು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಕೊರೊನಾ ಲಸಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಮತ್ತೆ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದ್ದಾರೆ. ಕೊರೊನಾ ಲಸಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಹೇಳಿಕೆಗಳು ಗೊಂದಲವನ್ನುಂಟು ಮಾಡಿವೆ. ಲಸಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೊದಿಯವರ ನಿಲುವು ಏನು ಎಂದು ಅವರು ಕೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಎಲ್ಲರಿಗೂ ಲಸಿಕೆ ಸಿಗುತ್ತದೆ ಎನ್ನುತ್ತಾರೆ. ಆದರೆ ಚುನಾವಣೆ ವೇಳೆ ಬಿಜೆಪಿ ಬಿಹಾರದ ಪ್ರತಿಯೊಬ್ಬರೂ ಉಚಿತ ಕೊರೊನಾ ಲಸಿಕೆ ಪಡೆಯಲಿದ್ದಾರೆ ಎಂದು ಹೇಳಿದೆ. ಈಗ ಕೇಂದ್ರ ಸರ್ಕಾರ ಎಲ್ಲರಿಗೂ ಲಸಿಕೆ ನೀಡುತ್ತೇವೆ ಎಂದು ನಾವು ಹೇಳಿಲ್ಲ ಎನ್ನುತ್ತಿದೆ. ಈ ವಿಚಾರದಲ್ಲಿ ಪ್ರಧಾನಿ ಮೋದಿಯವರ ನಿಲುವು ಏನು ಎಂದಿದ್ದಾರೆ.

ಎರಡು ದಿನಗಳ ಹಿಂದೆ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮಾತನಾಡಿ, ಎಲ್ಲರಿಗೂ ಕೊರೊನಾ ಲಸಿಕೆ ನೀಡುವ ಕುರಿತು ಕೇಂದ್ರ ಸರ್ಕಾರ ಯೋಚಿಸಿಲ್ಲ ಎಂದಿದೆ. ಸುದ್ದಿಗೋಷ್ಠಿ ವೇಳೆ ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ದೇಶದ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ನೀಡುತ್ತೇವೆ ಎಂದು ಸರ್ಕಾರ ಎಂದೂ ಹೇಳಿಲ್ಲ ಎಂದಿದ್ದಾರೆ.

ಈ ಕುರಿತು ನಾನು ಸ್ಪಷ್ಟನೆ ನೀಡಲು ಬಯಸುತ್ತೇನೆ, ಇಡೀ ದೇಶಕ್ಕೆ ಕೊರೊನಾ ಲಸಿಕೆ ನೀಡುವ ಕುರಿತು ಸರ್ಕಾರ ಎಂದೂ ಮಾತನಾಡಿಲ್ಲ. ವಾಸ್ತವಿಕ ಮಾಹಿತಿ ಆಧಾರದ ಮೇಲೆ ನಾವು ವೈಜ್ಞಾನಿಕ ವಿಚಾರಗಳ ಕುರಿತು ಚರ್ಚಿಸುವುದು ಮುಖ್ಯ ಎಂದಿದ್ದಾರೆ.

ಲಸಿಕೆಯ ಪರಿಣಾಮದ ಆಧಾರದ ಮೇಲೆ ಕೊರೊನಾ ಚೈನ್ ಕತ್ತರಿಸುವುದು ನಮ್ಮ ಉದ್ದೇಶವಾಗಿದೆ. ಸೋಂಕಿತರಿಗೆ ಹಾಗೂ ಸಂಪರ್ಕಿತರಿಗೆ ಲಸಿಕೆ ನೀಡುವ ಮೂಲಕ ವೈರಸ್ ಹರಡುವುದನ್ನು ತಡೆಯುವ ಸಾಧ್ಯತೆ ಇದ್ದರೆ. ಇಡೀ ದೇಶದ ಜನರಿಗೆ ಲಸಿಕೆ ಹಾಕಬೇಕಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ಐಸಿಎಂಆರ್) ಮಹಾನಿರ್ದೇಶಕ ಡಾ.ಬಲರಾಮ್ ಭಾರ್ಗವ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು. ಇದಕ್ಕೆ ಇದೀಗ ರಾಹುಲ್ ಗಾಂಧಿ ಟ್ವೀಟ್ ಮಾಡಿ ಸ್ಪಷ್ಟಪಡಿಸುವಂತೆ ಕೇಳಿದ್ದಾರೆ.

Comments

Leave a Reply

Your email address will not be published. Required fields are marked *