ಯಾರೋ ಹೇಳ್ತಾರೆ ಅಂತ ಲಾಕ್‍ಡೌನ್ ಮಾಡಲು ಆಗಲ್ಲ: ಆರ್ ಅಶೋಕ್

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಲಾಕ್ ಡೌನ್ ಬೇಕ್ವಾ ಬೇಡ್ವಾ ಅನ್ನೋ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ಮಧ್ಯೆ ಯಾರೋ ಹೇಳ್ತಾರೆ ಅಂತ ಲಾಕ್ ಡೌನ್ ಮಾಡಲು ಆಗಲ್ಲ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಸಭೆ ಆರಂಭಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾರೋ ಹೇಳುತ್ತಾರೆ ಅಂತ ಲಾಕ್‍ಡೌನ್ ಮಾಡಲು ಆಗಲ್ಲ. ದೇಶ ಹಾಗೂ ಪ್ರಪಂಚದಲ್ಲಿ ಲಾಕ್‍ಡೌನ್ ಇಲ್ಲ. ಎಲ್ಲ ಕಡೆ ಇದ್ದಂತೆ ಇಲ್ಲಿಯೂ ಇರುತ್ತೆ. ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ವೈಫಲ್ಯ ಆಗಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದರು.

ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಎಂ, ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ವಪಕ್ಷ ಶಾಸಕರ ಸಭೆ ಕರೆದಿದ್ದೇನೆ. ಅವರ ಜೊತೆ ಚರ್ಚೆ ಮಾಡುತ್ತೇವೆ. ಶಾಸಕರು ಅವರ ವಿಧಾನ ಸಭಾ ಕ್ಷೇತ್ರಗಳಲ್ಲಿ ಕ್ರಮ ಕೈಗೊಳ್ಳಬೇಕು. ಲಾಕ್ ಡೌನ್ ಪ್ರಶ್ನೆಯೇ ಇಲ್ಲ. ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಈಗ ಆರ್ಥಿಕ ಪರಿಸ್ಥಿತಿ ಸಧಾರಿಸುತ್ತಿದೆ. ಹೀಗಾಗಿ ಬೆಂಗಳೂರು ಲಾಕ್‍ಡೌನ್ ಪ್ರಸ್ತಾಪ ಇಲ್ಲ. ವಿಪಕ್ಷಗಳ ಸಲಹೆಯನ್ನ ಗಂಭೀರವಾಗಿ ಪರಿಗಣಿಸಿ ಮುಂದುವರಿಯುತ್ತೇವೆ ಎಂದು ಹೇಳಿದ್ದರು.

ಇತ್ತ ಲಾಕ್‍ಡೌನ್ ಬೇಕು ಎಂದು ಕೆಲ ಕಾಂಗ್ರೆಸ್, ಜೆಡಿಎಸ್ ಶಾಸಕರು ಒತ್ತಾಯಿಸಿದ್ದಾರೆ. ಅಗತ್ಯ ಇರುವ ಕಡೆ ಲಾಕ್‍ಡೌನ್ ಇರಲಿ ಎಂದು ಕೆಲ ಬಿಜೆಪಿ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಲ್ಲರ ಅಭಿಪ್ರಾಯಗಳನ್ನ ಸಂಗ್ರಹಿಸಿ ಜುಲೈ 4ರ ಬಳಿಕ ಸರ್ಕಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

Comments

Leave a Reply

Your email address will not be published. Required fields are marked *