ಯಾರಿಗೆ ಅನುಭವವಿದ್ಯೋ ಅವರೇ ಈಗ ಟ್ಯಾಪಿಂಗ್ ಬಗ್ಗೆ ಮಾತಾಡ್ತಿರೋದು ಆಶ್ಚರ್ಯ: ಅಶೋಕ್

ಬೆಂಗಳೂರು: ಯಾರಿಗೆ ಫೋನ್ ಟ್ಯಾಪ್ ಮಾಡಿ ಅನುಭವ ಇದೆಯೋ ಹಾಗೆಯೇ ಯಾವ ಸರ್ಕಾರ ಹಿಂದೆ ಫೋನ್ ಟ್ಯಾಪ್ ಮಾಡಿತ್ತೋ, ಅವರೇ ಈಗ ಟ್ಯಾಪಿಂಗ್ ಬಗ್ಗೆ ಮಾತಾಡ್ತಿರೋದು ಆಶ್ಚರ್ಯ ಎಂದು ಸಚಿವ ಆರ್ ಅಶೋಕ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಅವರದ್ದೇ ಸರ್ಕಾರ ಇದ್ದಾಗ ಫೋನ್ ಟ್ಯಾಪ್ ಆಗಿದ್ದು ಗೊತ್ತಿದೆ. ಹಿಂದಿನ ಸರ್ಕಾರದ ಫೋನ್ ಟ್ಯಾಪ್ ತನಿಖೆ ಒಂದು ಹಂತಕ್ಕೆ ಬರುತ್ತಿದೆ. ಯಾರಿಗೆ ಫೋನ್ ಟ್ಯಾಪ್ ಮಾಡಿ ಅನುಭವ ಇದೆಯೋ, ಅವರೇ ಈಗ ಟ್ಯಾಪಿಂಗ್ ವಿಚಾರ ಮಾತಾಡ್ತಿರೋದು ಆಶ್ಚರ್ಯ ತಂದಿದೆ ಎಂದು ಡಿಕೆಶಿಗೆ ಅಶೋಕ್ ಟಾಂಗ್ ನೀಡಿದರು. ಇದನ್ನೂ ಓದಿ: ನನ್ನ ಫೋನ್ ಟ್ಯಾಪಿಂಗ್ ಆಗ್ತಿರೋದು ನಿಜ- ಸರ್ಕಾರದ ವಿರುದ್ಧ ಡಿಕೆಶಿ ಗಂಭೀರ ಆರೋಪ

ಇದೊಂಥರಾ ಭೂತದ ಬಾಯಲ್ಲಿ ಭಗದ್ಗೀತೆ ಹೇಳಿದಂತೆ ಕಾಣಿಸ್ತಿದೆ. ಬಸವರಾಜ್ ಬೊಮ್ಮಾಯಿ ಆ ತರಹ ಸಂಸ್ಕೃತಿಯಿಂದ ಬಂದವರಲ್ಲ. ಇದೆಲ್ಲ ಏನಾದ್ರೂ ಇದ್ದರೆ ಕಾಂಗ್ರೆಸ್ ನವರದ್ದೇ ಕಲ್ಚರ್. ಫೋನ್ ಟ್ಯಾಪ್ ಮಾಡುವ ಅಭ್ಯಾಸ, ಅವಶ್ಯಕತೆ ನಮ್ಮ ಸರ್ಕಾರಕ್ಕಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ, ಅವರದ್ದೇ ಪಕ್ಷದಲ್ಲಿ ಅಭದ್ರತೆ ಇದೆ ಎಂದರು. ಇದನ್ನೂ ಓದಿ:  ದಕ್ಷ ಅಧಿಕಾರಿಯನ್ನು ಏಜೆಂಟ್ ಎಂದಿರೋದನ್ನ ಖಂಡಿಸ್ತೀನಿ: ಡಿಕೆಶಿಗೆ ಬೊಮ್ಮಾಯಿ ತಿರುಗೇಟು

ಇದೇ ವೇಳೆ ಕಮಲ್ ಪಂಥ್ ಅವರಿಗೆ ಡಿಕೆಶಿ ವಾರ್ನಿಂಗ್ ಮಾಡಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅಶೋಕ್, ದಕ್ಷ ಅಧಿಕಾರಿ ಕಮಲ್ ಪಂಥ್ ಅವರು ಗಲಭೆಯಲ್ಲಿ ಭಾಗಿಯಾದವರ ಹೆಡೆಮುರಿ ಕಟ್ಟಿದ್ದಾರೆ. ಪೊಲೀಸರನ್ನು ಹೊಡೆದಂತವರು, ಸ್ಟೇಷನ್ ಗೆ ನುಗ್ಗಿ ಬೆಂಕಿ ಹಚ್ಚಿದವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬಂಧಿಸಿದ ಕಮಿಷನರ್ ಬಿಜೆಪಿ ಏಜೆಂಟ್ ಅಂತ ಹೇಳಿದರೆ ಹೇಗೆ? ಪೊಲೀಸ್ ಠಾಣೆಗೆ ಬೆಂಕಿ ಇಟ್ಟವರು ಧರ್ಮಾತ್ಮರಾ?, ಕಾಂಗ್ರೆಸ್ ಈ ಸಂಸ್ಕೃತಿ ಬಿಟ್ಟು ಬಿಡಿ. ಈ ದಬ್ಬಾಳಿಕೆ, ಆರೋಪ ನಿಮಗೆ ಬಂದಿರುವ ಬಳುವಳಿ. ಯಾರನ್ನೋ ರಕ್ಷಣೆ ಮಾಡೋದಕ್ಕೆ ಕಮಿಷನರ್ ಗೆ ವಾರ್ನಿಂಗ್ ಕೊಡೋದು ಸರಿಯಲ್ಲ ಎಂದು ಡಿಕೆಶಿಗೆ ಅಶೋಕ್ ತಿರುಗೇಟು ನೀಡಿದರು.  ಇದನ್ನೂ ಓದಿ: ಮಿಸ್ಟರ್ ಪೊಲೀಸ್ ಕಮೀಷನರ್ ಬೆಂಗ್ಳೂರು ಗಲಭೆಯಲ್ಲಿ ನೀವು ಬಿಜೆಪಿ ಏಜೆಂಟ್ ರೀತಿ ವರ್ತಿಸ್ತಿದ್ದೀರಿ: ಡಿಕೆಶಿ

Comments

Leave a Reply

Your email address will not be published. Required fields are marked *