‘ಯಶಸ್ವಿ’ಯ ಯಶಸ್ಸಿಗೆ ವಿಶೇಷ ಉಡುಗೊರೆ ನೀಡಿದ ಬಟ್ಲರ್

ಡೆಲ್ಲಿ: 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಂದೂಡಿದ ಬೆನ್ನಲ್ಲೇ ತವರಿಗೆ ತೆರಳಲು ಸಜ್ಜಾದ ರಾಜಸ್ಥಾನ ರಾಯಲ್ಸ್ ತಂಡ ಆರಂಭಿಕ ಆಟಗಾರ ಜೋಸ್ ಬಟ್ಲರ್, ಭಾರತದ ಯುವ ಪ್ರತಿಭಾವಂತ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್‍ಗೆ ತಮ್ಮ ಬ್ಯಾಟ್‍ನ್ನು ಉಡುಗೊರೆಯಾಗಿ ನೀಡಿ ಶುಭ ಹಾರೈಸಿದ್ದಾರೆ.

13ನೇ ಆವೃತ್ತಿಯ ಐಪಿಎಲ್‍ನ ಆರಂಭಿಕ ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುತ್ತಿದ್ದರು. ಬಳಿಕ ಸ್ಟೋಕ್ಸ್ ಗಾಯಗೊಂಡು ಟೂರ್ನಿಯಿಂದ ಹೊರ ನಡೆದ ಬಳಿಕ ಬಟ್ಲರ್ ಜೊತೆ ಮನನ್ ವೋಹ್ರಾ ಆರಂಭಿಕರಾಗಿ ಆಡುತ್ತಿದ್ದರು. ಆದರೆ ವೋಹ್ರಾ ಸತತ ವೈಫಲ್ಯವನ್ನು ಕಂಡ ನಂತರ ಬಟ್ಲರ್ ಜೊತೆ ಯಶಸ್ವಿ ಜೈಸ್ವಾಲ್‍ನ್ನು ಓಪನಿಂಗ್ ಬ್ಯಾಟ್ಸ್ ಮ್ಯಾನ್ ಆಗಿ ಆಡಿಸಲಾಗಿತ್ತು. ಬಳಿಕ ಈ ಜೋಡಿ ರಾಜಸ್ಥಾನ ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿತ್ತು. ಬಟ್ಲರ್, ಜೈಸ್ವಾಲ್ ಜೊತೆ ಮುಂಬೈ ಇಂಡಿಯನ್ಸ್ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದು ಭರ್ಜರಿ ಶತಕವನ್ನು ಕೂಡ ಸಿಡಿಸಿದ್ದರು. ಈ ವೇಳೆ ಜೈಸ್ವಾಲ್ ಅವರ ಆಟವನ್ನು ಗಮನಿಸಿರುವ ಬಟ್ಲರ್ ಯುವ ಆಟಗಾರನಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಾನು ಶತಕ ಬಾರಿಸಿದ ಬ್ಯಾಟ್‍ನ್ನು ಕೊಡುಗೆಯಾಗಿ ನೀಡಿದ್ದಾರೆ.

ಬಟ್ಲರ್ ಬ್ಯಾಟ್‍ನಲ್ಲಿ ‘ಟೂ ವಿಶ್ ಯಶ್, ಎಂಜಾಯ್ ಯುವರ್ ಟಾಲೆಂಟ್. ಬೆಸ್ಟ್ ವಿಶಸ್ ಎಂದು ಬರೆದುಕೊಂಡು ಬ್ಯಾಟ್‍ನೊಂದಿಗೆ ಒಂದು ಸಂದೇಶವನ್ನು ಕೂಡ ಬರೆದು ಜೈಸ್ವಾಲ್ ಕೈಗೆ ನೀಡಿದ್ದಾರೆ. ಇದನ್ನು ಪಡೆದುಕೊಂಡ ಜೈಸ್ವಾಲ್ ತುಂಬಾ ಸಂತೋಷಗೊಂಡಿದ್ದಾರೆ. ಈ ಸುಂದರ ಕ್ಷಣವನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮೂಲಕ ಹಂಚಿಕೊಂಡಿದೆ.

ಯಶಸ್ವಿ ಬಡವರ್ಗದಿಂದ ಬಂದಂತಹ ಹುಡುಗ, ತನ್ನ ಪ್ರತಿಭೆಯ ಮೂಲಕ ಕ್ರಿಕೆಟ್‍ನಲ್ಲಿ ಹೊಸ ಭರವಸೆಯನ್ನು ಮೂಡಿಸಿರುವ ಈ ಆಟಗಾರನನ್ನು ಗುರುತಿಸಿರುವ ಬಟ್ಲರ್ ತಾನು ಐಪಿಎಲ್‍ನಲ್ಲಿ ಚೊಚ್ಚಲ ಶತಕ ಸಿಡಿಸಿದ ಬ್ಯಾಟ್‍ನ್ನು ಉಡುಗೊರೆಯಾಗಿ ನೀಡುವ ಮೂಲಕ ಯುವ ಆಟಗಾರನಿಗೆ ಸ್ಪೂರ್ತಿಯಾಗಿದ್ದರೆ.

Comments

Leave a Reply

Your email address will not be published. Required fields are marked *