ಯಲಹಂಕ ಕೋವಿಡ್ ಆಸ್ಪತ್ರೆಗೆ ನಿರ್ಮಲಾ ಸೀತಾರಾಮನ್ ಭೇಟಿ

ಬೆಂಗಳೂರು: ಬೋಯಿಂಗ್ ಸಂಸ್ಥೆಯು, ‘ಸೆಲ್ಕೋ’, ‘ಡಾಕ್ಟರ್ಸ್ ಫಾರ್ ಯು’ ಸಹಯೋಗದೊಂದಿಗೆ ಯಲಹಂಕದಲ್ಲಿ ನಿರ್ಮಿಸಿರುವ 100 ಹಾಸಿಗೆಗಳ ಅತ್ಯಾಧುನಿಕ ಕೋವಿಡ್-ಕೇರ್ ಸ್ಪೆಷಾಲಿಟಿ ಆಸ್ಪತ್ರೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಭೇಟಿ ನೀಡಿದರು.

ಯಲಹಂಕದಲ್ಲಿ ಬೋಯಿಂಗ್ ಸಂಸ್ಥೆಯು ಕೋವಿಡ್ ಕೇರ್ ಆಸ್ಪತ್ರೆ ನಿರ್ಮಿಸುತ್ತಿರುವ ವಿಷಯವನ್ನು ರಾಜ್ಯಕ್ಕೆ ಮೊದಲಿಗೆ ತಿಳಿಸಿದವರೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ಮೇ 7ರಂದು ಈ ವಿಷಯವನ್ನು ಟ್ವೀಟ್ ಮಾಡಿದ್ದ ವಿತ್ತ ಸಚಿವರಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಧನ್ಯವಾದ ಹೇಳಿದ್ದರು.

ಬೋಯಿಂಗ್ ಸಂಸ್ಥೆಯು ‘ಸೆಲ್ಕೋ’ ಮತ್ತು ‘ಡಾಕ್ಟರ್ಸ್ ಫಾರ್ ಯು’ ಸಹಯೋಗದೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಕೋವಿಡ್-ಕೇರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು. ಕಾರ್ಪೋರೇಟ್ ಕಂಪನಿಗಳು ತಮ್ಮ ಸಮುದಾಯಿಕ ಜವಾಬ್ದಾರಿ ಕಾರ್ಯಕ್ರಮದ ಭಾಗವಾಗಿ ಕೋವಿಡ್ ಅಲೆ ನಿಯಂತ್ರಣ, ಚಿಕಿತ್ಸೆಯಲ್ಲಿ ಭಾಗಿಯಾಗಿರುವುದು ಶ್ಲಾಘನೀಯ ಎಂದರು.

ಕರ್ನಾಟಕ ವಿದ್ಯುತ್ ನಿಗಮ ಆಸ್ಪತ್ರೆ ನಿರ್ಮಾಣಕ್ಕೆ ಅರ್ಧ ಎಕರೆ ಜಾಗ ಅಗತ್ಯ ಜಾಗ ಒದಗಿಸಿದೆ. ಡಾಕ್ಟರ್ಸ್ ಫಾರ್ ಯು ಸರ್ಕಾರೇತರ ಸಂಸ್ಥೆಯು ಆಸ್ಪತ್ರೆ ನಿರ್ವಹಣೆ ಮತ್ತು ಆರೋಗ್ಯ ಸೇವೆ ಒದಗಿಸುವ ಜವಾಬ್ದಾರಿ ವಹಿಸಿಕೊಂಡಿದೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಇರುವ ಆಸ್ಪತ್ರೆಯನ್ನು ಕೇವಲ 20 ದಿನದೊಳಗೆ ಪೂರ್ಣಗೊಳಿಸಿರುವುದು ವಿಶೇಷ.

ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣಾ ಉಪಸ್ಥಿತರಿದ್ದರು.

 

Comments

Leave a Reply

Your email address will not be published. Required fields are marked *