ಯತ್ನಾಳ್‍ಗೆ ನೀಡಿದ್ದ ಭದ್ರತೆ ವಾಪಸ್ – ಸಿಎಂ ವಿರುದ್ಧ ಮತ್ತೆ ಆಕ್ರೋಶ

– ನಿಮ್ಮ ಭದ್ರತೆ ನಂಬಿ ಹೋರಾಟ ಮಾಡುತ್ತಿಲ್ಲ ಎಂದು ಕಿಡಿ

ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೀಡಿದ್ದ ವಿಶೇಷ ವೈಯಕ್ತಿಕ ಭದ್ರತೆಯನ್ನು ಸರ್ಕಾರ ವಾಪಸ್ ಪಡೆದಿದ್ದು, ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಯತ್ನಾಳ್ ವಿರುದ್ಧ ಸೇಡಿನ ರಾಜಕಾರಣ ಶುರು ಮಾಡಿದ್ದಾರಾ ಎಂಬ ಪ್ರಶ್ನೆ ಈಗ ಎದ್ದಿದೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ನೀಡಿದ್ದ ವಿಶೇಷ ವೈಯಕ್ತಿಕ ಭದ್ರತೆಯನ್ನು ಸರ್ಕಾರ ವಾಪಸ್ ಪಡೆದಿದೆ. ಇಂದಿನಿಂದ ಭದ್ರತೆ ವಾಪಸ್ ಪಡೆಯಲಾಗಿದ್ದು, ಸರ್ಕಾರದ ಕ್ರಮಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಕೆಂಡಾಮಂಡಲವಾಗಿದ್ದಾರೆ. ಇದನ್ನೂ ಓದಿ: ಬಿಎಸ್‍ವೈಯಿಂದ ಕುಟುಂಬ ರಾಜಕಾರಣ – ಯತ್ನಾಳ್ ಕಿಡಿ

ಈ ಬಗ್ಗೆ ಸಿಎಂ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಪೊಲೀಸ್ ಆಯುಕ್ತರಿಗೆ ಪತ್ರ ಖಾರವಾಗಿ ಪತ್ರ ಬರೆದಿದ್ದಾರೆ.

ನಾನು ಸಿಎಂ ವಿರುದ್ಧ ಹೇಳಿಕೆ ನೀಡಿರುವ ಕಾರಣಕ್ಕೆ ದ್ವೇಷದ ರಾಜಕೀಯ ಮಾಡುತ್ತಿದ್ದೀರಿ, ನಿಮ್ಮ ಹಳೆಯ ಸೇಡಿನ ರಾಜಕೀಯಕ್ಕೆ ಈ ಕ್ರಮ ವಹಿಸಿದ್ದೀರಿ. ಇದು ನಿಮ್ಮ ಹಳೆ ಚಾಳಿ, ವಿಕೃತ ಮನಸ್ಥಿತಿ ಬಿಂಬಿಸುತ್ತದೆ. ನಾನು ಪ್ರಖರ ಹಿಂದುತ್ವವಾದಿ, ನನ್ನ ಮೇಲೆ ಸಾಕಷ್ಟು ಬಾರಿ ದಾಳಿಗೆ ಸಂಚು ನಡೆದಿತ್ತು. ನನ್ನ ಜನಪರ ನಿಲುವಿನ ಹೋರಾಟಕ್ಕೆ ಕೆಲವರು ದಾಳಿಗೆ ಸಂಚು ರೂಪಿಸಿದ್ದರು. ಇದನ್ನು ಅರಿತ ಸರ್ಕಾರ ಅಂದು ನನಗೆ ಭದ್ರತೆ ನೀಡಿತ್ತು. ಆದರೆ ಬಿಎಸ್‍ವೈ ತಮ್ಮ ವಿರುದ್ಧ ಹೇಳಿಕೆ ನೀಡಿರುವ ಕಾರಣಕ್ಕೆ ವಾಪಸ್ ಪಡೆದಿದ್ದಾರೆ ಎಂದು ಕಿಡಿಕಾರಿದ್ದಾರೆ.

ನಾನು ನಿಮ್ಮ ಭದ್ರತೆಯನ್ನು ನಂಬಿಕೊಂಡು ಹೋರಾಟ ಮಾಡುತ್ತಿಲ್ಲ. ನಿಮ್ಮ ಈ ಕ್ರಮದಿಂದ ನನ್ನ ಹೋರಾಟ ನಿಲ್ಲುವುದಿಲ್ಲ. ಮುಂದೆ ನನ್ನ ಮೇಲೆ ಏನೇ ಅಹಿತಕರ ಘಟನೆಗಳಾದಲ್ಲಿ ನೀವೇ ಹೊಣೆ ಎಂದು ಪತ್ರದಲ್ಲಿ ಖಾರವಾಗಿಯೇ ಯತ್ನಾಳ್ ಬರೆದಿದ್ದಾರೆ.

ನಿನ್ನೆಯಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದರು. ಸಿಡಿ ವಿಚಾರ ಹಾಗೂ ಕುಟುಂಬ ರಾಜಕಾರಣದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದ್ದರು.

Comments

Leave a Reply

Your email address will not be published. Required fields are marked *