ಯಗಚಿ ಜಲಾಶಯ ಭರ್ತಿ- ದೇವಾಲಯದ ಮೆಟ್ಟಿಲವರೆಗೂ ಹೇಮಾವತಿ ನದಿ ನೀರು

ಹಾಸನ: ಕರ್ನಾಟಕದಲ್ಲಿ ಭಾರೀ ಮಳೆ ಆಗುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಇತ್ತ ಹೇಮಾವತಿ ನದಿ ಪಾತ್ರದಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೇಮಾವತಿ ಒಳಹರಿವಿನಲ್ಲಿ ಮತ್ತಷ್ಟು ಹೆಚ್ಚಳವಾಗಿದೆ.

ಹೇಮಾವತಿ ನದಿಯಲ್ಲಿ ಇಂದಿನ ಒಳಹರಿವು 36,849 ಕ್ಯೂಸೆಕ್‍ಗೆ ಏರಿಕೆ ಆಗಿದೆ. ಬುಧವಾರ ಬೆಳಗ್ಗೆ 24,185 ಕ್ಯೂಸೆಕ್‍ನಷ್ಟಿದ್ದ ಒಳಹರಿವು ಕಳೆದ 48 ಗಂಟೆಯಲ್ಲಿ ಒಳಹರಿವಿನ ಪ್ರಮಾಣದಲ್ಲಿ ಏರಿಕೆ ಆಗಿದೆ.

ಹೇಮಾವತಿ ಅಣೆಕಟ್ಟೆಯ ಗರಿಷ್ಟ ಮಟ್ಟ 2922.00 ಅಡಿಯಾಗಿದ್ದು, ಇಂದಿನ ಮಟ್ಟ 2906.29 ಅಡಿ ಆಗಿದೆ. ಒಳ ಹರಿವು 36,849 ಕ್ಯೂಸೆಕ್‍ನಷ್ಟಿದ್ದು, ಹೊರ ಹರಿವು 1,400 ಕ್ಯೂಸೆಕ್ ಆಗಿದೆ. ಅಣೆಕಟ್ಟೆಯ ಗರಿಷ್ಟ ಸಂಗ್ರಹ ಮಟ್ಟ 37.103 ಟಿಎಂಸಿ ಆಗಿದ್ದು, ಇಂದಿನ ಸಂಗ್ರಹ ಮಟ್ಟ 23.97 ಟಿಎಂಸಿ ಆಗಿದೆ.

ಮಲೆನಾಡಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಬೇಲೂರಿನ ಯಗಚಿ ಜಲಾಶಯ ಭರ್ತಿಯಾಗಿದ್ದು, ಮುಂಜಾಗ್ರತೆಯಿಂದ ಜಲಾಶಯದಿಂದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ನಾಲ್ಕು ಕ್ರಸ್ಟ್ ಗೇಟ್ ಮೂಲಕ 1,500 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಕ್ಕೆ ಬಿಡಲಾಗುತ್ತಿದೆ.

ಚಿಕ್ಕಮಗಳೂರು, ಮೂಡಿಗೆರೆ, ಬೇಲೂರು ತಾಲೂಕಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ 1,700ಕ್ಕೂ ಅಧಿಕ ಕ್ಯೂಸೆಕ್ ಒಳಹರಿವು ಬರುತ್ತಿದೆ. ಜಲಾಶಯದ ಗರಿಷ್ಟ ಮಟ್ಟ 964.60 ಅಡಿಯಾಗಿದ್ದು, ಜಲಾಶಯದ ಇಂದಿನ ಮಟ್ಟ 964.40 ಅಡಿಯಾಗಿದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.

ಹೇಮಾವತಿ ನದಿ ತುಂಬಿ ಹರಿಯುತ್ತಿರುವ ಪರಿಣಾಮ ಹಾಸನ ಜಿಲ್ಲೆಯ ಸಕಲೇಶಪುರದ ಹೊಳೆಮಲ್ಲೇಶ್ವರ ದೇವಾಲಯದ ಮೆಟ್ಟಿಲವರೆಗೂ ನೀರು ಬಂದಿದೆ. ಬೆಂಗಳೂರು- ಮಂಗಳೂರು ಹೆದ್ದಾರಿ ಪಕ್ಕದಲ್ಲೇ ಈ ದೇವಾಲಯ ಇದೆ. ನಿರಂತರವಾಗಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ದೇವಾಲಯದ ಮೆಟ್ಟಿಲವರೆಗೂ ಹೇಮಾವತಿ ನದಿ ನೀರು ಆವರಿಸಿದೆ.

Comments

Leave a Reply

Your email address will not be published. Required fields are marked *