ಯಕ್ಷಲೋಕದ ಅನರ್ಘ್ಯ ರತ್ನ ಮಲ್ಪೆ ವಾಸುದೇವ ಸಾಮಗ ಇನ್ನಿಲ್ಲ

ಉಡುಪಿ: ಯಕ್ಷಲೋಕದ ರತ್ನ ಹಿರಿಯ ಯಕ್ಷಗಾನ ಕಲಾವಿದ, ಅರ್ಥಧಾರಿ, ಸಂಘಟಕ, ಯಕ್ಷ ಕವಿ ಮಲ್ಪೆ ವಾಸುದೇವ ಸಾಮಗ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಯಕ್ಷಗಾನ ವಿದ್ವತ್ ಪರಂಪರೆಯ ಮತ್ತೊಂದು ಕೊಂಡಿ ಕಳಚಿದೆ.

ಸಾಮಗರಿಗೆ 71 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಕೋವಿಡ್ ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ ನಿಧನರಾಗಿದ್ದಾರೆ. ಯಕ್ಷಗಾನ ರಂಗದಲ್ಲಿ ತನ್ನ ವಾಕ್ಪಟುತ್ವದಿಂದ ಖ್ಯಾತಿಗಳಿಸಿದ್ದ ವಾಸುದೇವ ಸಾಮಗರು, ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದರು. ಅಮೃತೇಶ್ವರಿ ಮೇಳದ ಮೂಲಕ ಯಕ್ಷಗಾನ ವೃತ್ತಿರಂಗಕ್ಕೆ ಕಾಲಿಟ್ಟಿದ್ದರು.

ಧರ್ಮಸ್ಥಳ, ಕದ್ರಿ, ಕರ್ನಾಟಕ, ಸುರತ್ಕಲ್, ಸಾಲಿಗ್ರಾಮ, ಬಗ್ವಾಡಿ, ಸೌಕೂರು ಮೇಳಗಳಲ್ಲಿಯೂ ಕಲಾ ಸೇವೆ ಸಲ್ಲಿಸಿದ್ದಾರೆ. ಮೇಳದ ಯಜಮಾನಿಕೆಯನ್ನೂ ಹೊತ್ತಿದ್ದರು. ಉತ್ತರಕುಮಾರ, ಯಕ್ಷಲೋಕ ವಿಜಯ ಪ್ರಸಂಗದ ಪ್ರದೀಪ, ಭಾನುತೇಜಸ್ವಿ ಪ್ರಸಂಗದ ಭಾನುತೇಜಸ್ವಿ ಮೊದಲಾದ ಪಾತ್ರಗಳು ಅವರಿಗೆ ಅಪಾರ ಜನಮನ್ನಣೆ ತಂದುಕೊಟ್ಟಿವೆ.

ಯಕ್ಷಗಾನದಲ್ಲಿ ಮೊದಲ ಬಾರಿಗೆ ಕೋರ್ಟ್ ಸನ್ನಿವೇಶವನ್ನು ಸೃಷ್ಟಿ ಮಾಡಿ ಹೊಸ ದಾಖಲೆ ಮಾಡಿದವರು. ಸಂಯಮಂ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಸಮಯ ಮಿತಿಯ ತಾಳಮದ್ದಳೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಕೊನೆಯ ತಾಳಮದ್ದಲೆಯನ್ನು ಕೆಲದಿನಗಳ ಹಿಂದೆ ಮೂಡುಬಿದರೆಯ ಅಲಂಗಾರಿನಲ್ಲಿ ನಡೆಸಿದ್ದರು. ಅಪಾರ ಯಕ್ಷಗಾನ ಅಭಿಮಾನಿಗಳನ್ನು ತನ್ನ ಮಾತಿನ ಮೂಲಕ, ಜ್ಞಾನ ಸಂಪತ್ತಿನ ಮೂಲಕ ಸಂಪಾದಿಸಿದ್ದರು.

Comments

Leave a Reply

Your email address will not be published. Required fields are marked *