ಮ್ಯಾನೇಜರ್ ಸೇರಿ ಐವರಿಗೆ ಕೊರೊನಾ, ಬ್ಯಾಂಕ್ ಸೀಲ್‍ಡೌನ್

ಚಿಕ್ಕಮಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ ಆಗ್ತಿದೆ. ಇನ್ನೇನು ನಾಳೆ-ನಾಡಿದ್ದು ಅನ್ನುವಷ್ಟರಲ್ಲಿ ಲಸಿಕೆಯೂ ಸಿಗುತ್ತೆ, ಅಬ್ಬಾ… ಈ ಹೆಮ್ಮಾರಿ ತೊಲಗಿತು ಎಂದು ಜನಸಾಮಾನ್ಯರು ನಿಟ್ಟುಸಿರು ಬಿಡುವ ಹೊತ್ತಿಗೆ ಮತ್ತೆ ಕೊರೊನಾದಿಂದ ಕಳಸ ಪಟ್ಟಣದ ಬ್ಯಾಂಕ್‍ವೊಂದು ಸೀಲ್‍ಡೌನ್

ಕರ್ನಾಟಕ ಬ್ಯಾಂಕ್ ಎರಡು ದಿನಗಳ ಕಾಲ ಕೊರೊನಾ ಆತಂಕದಿಂದ ಸೀಲ್‍ಡೌನ್ ಆಗಿದೆ. ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಐವರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆ ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳ ಕಾಲ ಬ್ಯಾಂಕನ್ನು ಸೀಲ್‍ಡೌನ್ ಮಾಡಲಾಗಿತ್ತು.

ಶುಕ್ರವಾರ, ಶನಿವಾರ ಹಾಗೂ ಇಂದು ಭಾನುವಾರವಾದ್ದರಿಂದ ಜನರಿಗೆ ಬ್ಯಾಂಕ್ ಇಲ್ಲದೆ ತೀವ್ರ ಸಮಸ್ಯೆ ಎದುರಾಗಿತ್ತು. ಕಳಸ ಪಟ್ಟಣ ಸುತ್ತಮುತ್ತ ಅಡಿಕೆ, ಕಾಫಿ ತೋಟವೇ ಹೆಚ್ಚಿದ್ದು, ಈ ಭಾಗದಲ್ಲಿ ಕೂಲಿ ಕಾರ್ಮಿಕರ ಸಂಖ್ಯೆಯೂ ಹೆಚಾಗಿದೆ. ಗ್ರಾಮೀಣ ಭಾಗವಾದ್ದರಿಂದ ಬಹುತೇಕ ಕೂಲಿ ಕಾರ್ಮಿಕರು ಕರ್ನಾಟಕ ಬ್ಯಾಂಕಲ್ಲಿ ಅಕೌಂಟ್ ಮಾಡಿಸಿದ್ದು ಕಳೆದ ಮೂರು ದಿನಗಳಿಂದ ಹಣ ಬಿಡಿಸಲಾಗದೇ ಒದ್ದಾಡಿದ್ದಾರೆ.

ಕೆಲವರು ಕೂಲಿ ಕಾರ್ಮಿಕರು ಮಾಡಿದ ಕೆಲಸಕ್ಕೆ ಕೂಲಿ ನೀಡಲು ಹಣ ಬಿಡಿಸಲಾಗದಂತಹಾ ಸ್ಥಿತಿ ನಿರ್ಮಾಣವಾಗಿದೆ. ಬ್ಯಾಂಕ್ ಸೀಲ್‍ಡೌನ್‍ನಿಂದ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನಸಾಮಾನ್ಯರು ತೀವ್ರ ಸಂಕಷ್ಟ ಎದುರಿಸಿದ್ದಾರೆ. ಈ ಬ್ಯಾಂಕಿನಲ್ಲಿ ಏಳು ಜನ ಕೆಲಸ ಮಾಡುತ್ತಿದ್ದು, ಐದು  ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು.

Comments

Leave a Reply

Your email address will not be published. Required fields are marked *