ಮ್ಯಾಟ್ರಿಮೋನಿಯಲ್ಲಿ ಮದ್ವೆಯಾಗೋದಾಗಿ ಯುವತಿಯನ್ನ ವಂಚಿಸಿದ್ದ ಆರೋಪಿ ಅರೆಸ್ಟ್

ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ಮದುವೆ ಆಗುವುದಾಗಿ ಯುವತಿಯನ್ನ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಮೇಶ್ ಅಲಿಯಾಸ್ ಜಗನ್ನಾಥ್ ಬಂಧಿತ ಆರೋಪಿ. ಬನಶಂಕರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ರಮೇಶ್ ಮ್ಯಾಟ್ರಿಮೋನಿಯಲ್ಲಿ ಮದುವೆ ಆಗುವುದಾಗಿ ಯುವತಿಯರನ್ನ ನಂಬಿಸಿ ಮೋಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

ಆರೋಪಿ ರಮೇಶ್ ಇತ್ತೀಚೆಗೆ ಮ್ಯಾಟ್ರಿಮೋನಿಯಲ್ಲಿ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದನು. ನಂತರ ಆಕೆಗೆ ಮದುವೆ ಆಗುವುದಾಗಿ ನಂಬಿಸಿದ್ದನು. ಬಳಿಕ ಸೈಟ್ ಕೊಳ್ಳಲು ಹಣದ ಅವಶ್ಯಕತೆ ಇದೆ ಆರೋಪಿ ರಮೇಶ್ ಯುವತಿಯ ಬಳಿ 7 ಲಕ್ಷ ಹಣ ಕೇಳಿದ್ದನು.

ಅದರಂತೆಯೇ ಯುವತಿ ಕೂಡ ರಮೇಶ್‍ನನ್ನು ನಂಬಿ 7 ಲಕ್ಷ ಹಣ ಕೊಟ್ಟಿದ್ದರು. ಆದರೆ ಆರೋಪಿ ಹಣ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದನು.

ಯುವತಿಗೆ ತಾನು ಮೋಸ ಹೋಗಿರುವ ಬಗ್ಗೆ ತಿಳಿದು ಬನಶಂಕರಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಇದೀಗ ಬನಶಂಕರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಜೊತೆ ಆರೋಪಿಯಿಂದ 6.8 ಲಕ್ಷ ನಗದು, ಒಂದು ಕಾರು ಮತ್ತು ಎರಡು ಮೊಬೈಲ್ ಸೇರಿದಂತೆ ವಿವಿಧ ಬ್ಯಾಂಕ್ ಖಾತೆಯ ದಾಖಲಾತಿಗಳು ವಶ ಪಡಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *