‘ಮೋದಿ ಹೇಳಿಕೆಯನ್ನು ತಿರುಚಲಾಗಿದೆ’ – ಪ್ರಧಾನಿ ಕಾರ್ಯಾಲಯ ಸ್ಪಷ್ಟನೆ

ನವದೆಹಲಿ: ನಮ್ಮ ಸಶಸ್ತ್ರ ಪಡೆಗಳ ಧೈರ್ಯದ ಪರಿಣಾಮ ಎಲ್‍ಎಸಿ(ಗಡಿ ವಾಸ್ತವಿಕ ರೇಖೆ) ದಾಟಲು ಚೀನಾ ಸೈನಿಕರಿಂದ ಸಾಧ್ಯವಾಗಲಿಲ್ಲ. 16 ಬಿಹಾರ ರೆಜಿಮೆಂಟ್‍ನ ಸೈನಿಕರ ತ್ಯಾಗವೂ ಚೀನಾ ಸೈನಿಕರು ಭಾರತದ ಗಡಿ ದಾಟುವ ಪ್ರಯತ್ನವನ್ನು ವಿಫಲಗೊಳಿಸಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಸ್ಪಷ್ಟನೆ ನೀಡಿದೆ.

ಭಾರತದ ಒಂದಿಂಚು ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಹೇಳಿದ್ದರು ಎನ್ನಲಾದ ಸುದ್ದಿಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

ಚೀನಾ ಆಕ್ರಮಣಕ್ಕೆ ಪ್ರಧಾನಿ ಮೋದಿ ಭಾರತದ ಭೂ ಭಾಗವನ್ನು ಒಪ್ಪಿಸಿದ್ದಾರೆ. ಚೀನಾ ಭಾರತದ ಭೂಭಾಗ ಆಕ್ರಮಣ ಮಾಡಿಕೊಳ್ಳದಿದ್ದರೆ ಸೈನಿಕರ ಹತ್ಯೆ ಆಗಿದ್ದು ಏಕೆ? ಮತ್ತು ನಮ್ಮವರು ಎಲ್ಲಿ ಕೊಲ್ಲಲ್ಪಟ್ಟರು ಎಂದು ಖಾರವಾಗಿ ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದಂತೆ ಪ್ರಧಾನ ಮಂತ್ರಿಗಳ ಕಾರ್ಯಾಲಯ ಸ್ಪಷ್ಟನೆ ನೀಡಿದೆ.

ಎರಡು ಪುಟಗಳ ಸ್ಪಷ್ಟೀಕರಣ ಹೇಳಿಕೆಯಲ್ಲಿ ಯಾರು ಚೀನಾ ಸೈನಿಕರು ಭಾರತದ ಗಡಿಯನ್ನು ದಾಟಿಲ್ಲ ಮತ್ತು ನಮ್ಮ ಯಾವ ಸೈನಿಕರನ್ನು ಚೀನಾ ಸೆರೆಹಿಡಿದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಭೆಯಲ್ಲಿ ತಿಳಿಸಿದ್ದಾರೆ. ಆದರೆ ಮೋದಿ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ ಎಂದು ಸ್ಪಷ್ಟನೆಯಲ್ಲಿ ತಿಳಿಸಿದೆ.

ಜೂನ್ 15ರಂದು ಗಾಲ್ವಾನ್‍ನಲ್ಲಿ ಭಾರತ ಚೀನಾದ ಗಡಿ ಭಾಗದಲ್ಲಿ ಚೀನಾ ಬಲ ಹೆಚ್ಚಿಸಿಕೊಂಡಿತ್ತು ಮತ್ತು ಗಡಿ ದಾಟುವ ಪ್ರಯತ್ನ ಮಾಡಿತ್ತು. ನಮ್ಮ ಸಶಸ್ತ್ರ ಪಡೆಗಳ ಅವರನ್ನು ಹಿಮ್ಮೆಟ್ಟಿಸುವ ಕಾರ್ಯ ಮಾಡಿದ್ದಾರೆ. ಈ ವೇಳೆ ಸೈನಿಕರು ಮುಖಾಮುಖಿಯಾಗಿ ಘರ್ಷಣೆ ಸಂಭವಿಸಿದ್ದು 20 ಭಾರತೀಯ ಸೈನಿಕರ ಪ್ರಾಣಹಾನಿಗೆ ಕಾರಣವಾಗಿದೆ ಎಂದು ಮೋದಿ ಹೇಳಿದ್ದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಲಾಗಿದೆ.

ಗಡಿಯಲ್ಲಿ ಬಲ ಹೆಚ್ಚಿಸಿಕೊಂಡು ಚೀನಾ ಅತಿಕ್ರಮಣಕ್ಕೆ ಪ್ರಯತ್ನ ಮಾಡುತ್ತಿದೆ. ಇದು ಪರಿಸ್ಥಿತಿ ಉದ್ವಿಗ್ನತೆಗೆ ಕಾರಣವಾಗಿದೆ. ಆದರೆ ಭಾರತ ಗಡಿಯಲ್ಲಿ ಸೂಕ್ತ ಉತ್ತರ ನೀಡುತ್ತಿದೆ ಎಂದು ವಿರೋಧ ಪಕ್ಷಗಳ ಸಭೆಯಲ್ಲಿ ಪ್ರಧಾನಿ ಹೇಳಿದರು ಎಂದು ಪ್ರಧಾನಮಂತ್ರಿ ಕಾರ್ಯಲಯ ಹೇಳಿದೆ.

ಭಾರತದ ಒಂದಿಂಚು ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಹೇಳಿದರು ಎನ್ನುವ ಮಾಹಿತಿ ವರದಿಯಾಗುತ್ತದ್ದಂತೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಖಂಡನೆ ವ್ಯಕ್ತವಾಗಿತ್ತು ಮೋದಿ ಚೀನಾ ಆಕ್ರಮಣಕ್ಕೆ ಶರಣಾಗಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿ ಟ್ವೀಟ್‍ಗಳಾಗಿತ್ತಿತ್ತು.

Comments

Leave a Reply

Your email address will not be published. Required fields are marked *