ಮೋದಿ ಸ್ಟೇಡಿಯಂನಲ್ಲಿ ಅದಾನಿ, ರಿಲಯನ್ಸ್ ಎಂಡ್ – ಸುದ್ದಿಯಲ್ಲಿ ಏಕತಾ ಪ್ರತಿಮೆ, ಬರ್ನಲ್

– ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ

ಅಹ್ಮದಾಬಾದ್: ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್‌ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೊಟೆರಾ ಸ್ಟೇಡಿಯಂಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ನಾಮಕರಣ ಮಾಡಿದ್ದಕ್ಕೆ ಪರ, ವಿರೋಧ ಟೀಕೆ ವ್ಯಕ್ತವಾಗಿದೆ.

ಇಂದು ಬೆಳಗ್ಗೆ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ನರೇಂದ್ರ ಮೋದಿ ಕ್ರೀಡಾಂಗಣವನ್ನು ಉದ್ಘಾಟಿಸಿದ್ದು, ಇದೇ ವೇಳೆ ಸ್ಟೇಡಿಯಂಗೆ ನರೇಂದ್ರ ಮೋದಿ ಹೆಸರನ್ನು ನಾಮಕರಣ ಮಾಡಲಾಗಿದೆ. ಕ್ರೀಡಾಂಗಣದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‍ಕ್ಲೇವ್ ನಿರ್ಮಿಸಲಾಗಿದ್ದು, ಕ್ರೀಡಾ ಸಂಕೀರ್ಣವನ್ನು ಸಹ ನಿರ್ಮಿಸಲಾಗುತ್ತಿದೆ. ಇದೆಲ್ಲದ ಮಧ್ಯೆ ಇದೀಗ ಕ್ರಿಡಾಂಗಣಕ್ಕೆ ನರೇಂದ್ರ ಮೋದಿ ಹೆಸರು ಇಟ್ಟಿರುವ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

ಸರ್ದಾರ್ ವಲ್ಲಭಭಾಯ್ ಸ್ಟೇಡಿಯಂನ್ನು ನರೇಂದ್ರ ಮೋದಿ ಕ್ರೀಡಾಂಗಣವನ್ನಾಗಿ ಬದಲಿಸಿದ್ದಾರೆ. ಮುಂದೆ ಏನು? ಸರ್ದಾರ್ ವಲ್ಲಭಭಾಯ್ ಅವರ ಪುತ್ಥಳಿಗೆ ನರೇಂದ್ರ ಮೋದಿಯವರ ಮುಖವನ್ನು ಅಂಟಿಸುತ್ತಾರೆಯೇ ಎಂದು ಕಾಂಗ್ರೆಸ್‍ನವರು ಕಾಲೆಳೆಯುತ್ತಿದ್ದಾರೆ.

ಹಲವರು ವಿವಿಧ ರೀತಿಯ ಮಿಮ್ಸ್ ಗಳನ್ನು ಮಾಡುತ್ತಿದ್ದು, ಮುನ್ನಾಭಾಯ್ ಸಿನಿಮಾದ ದೃಶ್ಯಗಳನ್ನು ಹೋಲಿಸಿ ಮೆಮೆ ಮಾಡಿದ್ದಾರೆ. ಮುಂದೆ ಎಲ್ಲ ಪಾಕ್, ಸರ್ಕಲ್‍ಗಳಲ್ಲಿ ನರೇಂದ್ರ ಮೋದಿ ಪುತ್ಥಳಿ, ನೋಟ್‍ಗಳಲ್ಲಿ, ಶಾಲೆಗಳ ಪುಸ್ತಕಗಳಲ್ಲಿ, ನಿಮ್ಮ ಹುಟ್ಟುಹಬ್ಬವನ್ನು ಮೋದಿ ದಿನಾಚರಣೆಯಾಗಿ ಆಚರಿಸಲಾಗುವುದು ಎಂದೆಲ್ಲ ವಿಡಿಯೋ ಮಾಡಿದ್ದಾರೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿರುವ ಪಿಚ್‍ನ ಎರಡು ತುದಿಗಳಿಗೆ ರಿಲಯನ್ಸ್ ಎಂಡ್ ಮತ್ತು ಅದಾನಿ ಎಂಡ್ ಎಂದು ಹೆಸರನ್ನು ಇಡಲಾಗಿದೆ. ಈ ವಿಚಾರವನ್ನು ಪ್ರಸ್ತಾಪಿಸಿ ರಾಹುಲ್ ಗಾಂಧಿ ನರೇಂದ್ರ ಮೋದಿ ಕಾಲೆಳೆದಿದ್ದಾರೆ.

ಅಂತರಾಷ್ಟ್ರೀಯ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಹೆಸರಿಟ್ಟು, ಪಿಚ್‍ನ ತುದಿಗಳಿಗೆ ಅದಾನಿ ಹಾಗೂ ರಿಲಯನ್ಸ್ ಹೆಸರನ್ನು ಇಟ್ಟಿದ್ದಾರೆ. ಇದರ ತಾತ್ಪರ್ಯ ಗಾಡ್‍ಫಾದರ್ ಗಳನ್ನು ಯಾವತ್ತೂ ಮರೆಯುವುದಿಲ್ಲ ಎಂದರ್ಥ ಎಂದು ಕಾಂಗ್ರೆಸ್ ಟೀಕಿಸಿದೆ.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಸಹ ಟ್ವೀಟ್ ಮಾಡಿದ್ದು, ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ತಮಗೇ ತಾವೇ ಭಾರತ ರತ್ನ ಘೋಷಿಸಿಕೊಂಡಿದ್ದಾರೆ. ಅರ್ಹರು, ಕ್ರೀಡಾಂಗಣ, ಪಂದ್ಯಾವಳಿ ಮತ್ತು ಪ್ರಶಸ್ತಿಗಳಿಗೆ ನೆಹರು/ಗಾಂಧಿ ಕುಟುಂಬದ ಸದಸ್ಯರ ಹೆಸರು ಇಡಲಾಗಿದೆ. ಇವರೆಲ್ಲ ಅರ್ಹರು. ಆದರೆ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಮೊಟೆರಾ ಕ್ರೀಡಾಂಗಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ನಾಮಕರಣ ಮಾಡಿದರೆ ಆತ್ಮಶ್ಲಾಘನೆ, ವಾಹ್ ಲಿಬರಲ್ಸ್ ವಾಹ್ ಎಂದು ಕಾಂಗ್ರೆಸ್ ಕಾಲೆಳೆದಿದ್ದಾರೆ.

ರವಿಶಂಕರ್ ಪ್ರಸಾದ್ ಪ್ರತಿಕ್ರಿಯಿಸಿ, ಗುಜರಾತ್‍ನಲ್ಲಿ ಸರ್ದಾರ್ ವಲ್ಲಭಭಾಯ್ ಅವರ ವಿಶ್ವದ ಅತಿ ದೊಡ್ಡ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಈ ಪ್ರತಿಮೆ ವೀಕ್ಷಿಸಲು ಇಲ್ಲಿಯವರೆಗೆ ಯಾವೊಬ್ಬ ಕಾಂಗ್ರೆಸ್ ನಾಯಕ ತೆರಳಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಪಿಚ್ ಎರಡು ತುದಿಗಳಿಗೆ ಅದಾನಿ ಎಂಡ್ ಮತ್ತು ರಿಲಯನ್ಸ್ ಎಂಡ್ ಹೆಸರನ್ನು ಉದ್ದೇಶಪೂರ್ವಕವಾಗಿ ಇಡಲಾಗಿದೆ. ಈಗಾಗಲೇ ಈ ಹೆಸರನ್ನು ಕೇಳಿ ಸಿಟ್ಟಾಗುವ ಮಂದಿ ಮತ್ತಷ್ಟು ಸಿಟ್ಟಾಗಬೇಕೆಂದೇ ಇಡಲಾಗಿದೆ. ಟೀಕಿಸುವ ಮಂದಿಗೆ ಬರ್ನಲ್ ತಲುಪಿಸಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಮೋದಿಯನ್ನು ಬೆಂಬಲಿಸುವ ಜನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *