ಮೋದಿ, ಶಾ ಹೃದಯ ಕಲ್ಲಾಗಿದೆ : ಸಾಹಿತಿ ದೇವನೂರ ಮಹಾದೇವ

ಚಾಮರಾಜನಗರ: ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೃದಯ ಕಲ್ಲಾಗಿದೆ ಎಂದು ಹಿರಿಯ ಸಾಹಿತಿ ದೇವನೂರು ಮಹದೇವ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಾಮರಾಜನಗರದಲ್ಲಿ ರೈತ ನೇತಾರ ಪ್ರೊ. ಎಂ.ಡಿ ನಂಜುಂಡಸ್ವಾಮಿ 85 ನೇ ಜನ್ಮದಿನಾಚರಣೆ ಹಾಗೂ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಜಾಗೃತಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಜನರಿಂದ ಆಯ್ಕೆಯಾದವರು ಇಂದು ಸರ್ಕಾರ ನಡೆಸುತ್ತಿಲ್ಲ. ಬಂಡವಾಳಶಾಹಿಗಳಿಂದ ನೇಮಕಗೊಂಡ ವಂಚಕ ರಾಜಕಾರಣಿಗಳು ಸರ್ಕಾರ ನಡೆಸುತ್ತಿದ್ದಾರೆ. ಕೃಷಿ ಕಾಯ್ದೆ ವಿರೋಧಿ ಹೋರಾಟದಲ್ಲಿ ನೂರಾರು ರೈತರು ಮೃತ ಪಟ್ಟಿದ್ದರೂ ಸಹ ಪ್ರಧಾನಿ ಮೋದಿ ಹಾಗು ಅಮಿತ್ ಶಾ ಅವರ ಹೃದಯ ಕಲ್ಲಾಗಿದೆ ಎಂದು ಕಿಡಿಕಾರಿದರು.

ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ವಿಚಾರಧಾರೆಗಳು ಇಂದು ನಿಜವಾಗುತ್ತಿವೆ. ಅವರು ಬದುಕಿದ್ದರೆ ಇಂದು ಕಾನೂನು ಬಾಹಿರ ತಡೆ ಕಾಯ್ದೆಯನ್ವಯ ಜೈಲಿನಲ್ಲಿರುತ್ತಿದ್ದರು. ದೇಶ ದ್ರೋಹಿ ಎನಿಸಿಕೊಂಡು ಜೈಲಿಗೆ ತಳ್ಳಲ್ಪಡುತ್ತಿದ್ದರು.

ದೆಹಲಿಯಲ್ಲಿ ಹೋರಾಟನಿರತ ರೈತರು ತಮಗೆ ಪೊಲೀಸರು ಹಾಗೂ ಬಿಜೆಪಿಯವರು ಕೊಡುತ್ತಿರುವ ಕಿರುಕುಳ ಸಹಿಸಿಕೊಂಡು ಹೋರಾಟ ಮುಂದುವರಿಸಿದ್ದಾರೆ. ರೈತರೇನು ಮೂಢಾತ್ಮರಲ್ಲ. ಹಿಂದೆ ನರೇಂದ್ರ ಮೋದಿ ಕೃಷಿ ಮಾರುಕಟ್ಟೆ ಸುಧಾರಣಾ ಸಮಿತಿಗೆ ನೇಮಕಗೊಂಡಿದ್ದಾಗ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿ ಕಡ್ಡಾಯಗೊಳಿಸಬೇಕು ಎಂದು ವರದಿ ನೀಡಿದ್ದರು. ಆದರೆ ಇಂದು ಅವರ ಮಾತು ಅವರೇ ಕೇಳುತ್ತಿಲ್ಲ ಎಂದು ಟೀಕಿಸಿದರು.

ಲಂಗು ಲಗಾಮು ಇಲ್ಲದೆ ಕಾನೂನುಗಳು ಜಾರಿಯಾದರೆ, ರೈತ ಬೆಳೆದ ಬೆಳೆಗಳ ಕೃತಕ ಅಭಾವ ಸೃಷ್ಠಿಯಾಗುತ್ತದೆ. ಎಲ್ಲಾ ಪದಾರ್ಥಗಳ ಬೆಲೆ ಗಗನಕ್ಕೇರುತ್ತವೆ. ಮಧ್ಯಮವರ್ಗದವರು ಬಡತನದತ್ತ ದೂಡಲ್ಪಡುತ್ತಾರೆ. ಬಡವರು ಹಸಿವಿನ ದವಡೆಗೆ ಸಿಲುಕುತ್ತಾರೆ ಎಂದು ದೇವನೂರು ಮಹದೇವ ಎಚ್ಚರಿಸಿದರು.

ಕೃಷಿ ಕಾನೂನು ಕೇವಲ ರೈತರಿಗೆ ಸಂಬಂಧಪಟ್ಟಿದ್ದಲ್ಲ. ಇದು ಎಲ್ಲಾ ವರ್ಗದ ಜನರಿಗೆ ಅನ್ವಯಿಸುತ್ತದೆ ಈ ನೆಲದ ಮೇಲೆ ಬದುಕುತ್ತಿರುವ ಪ್ರತಿಯೊಬ್ಬರೂ ಇದನ್ನು ಮನಗಾಣಬೇಕು ಎಂದು ಅವರು ಹೇಳಿದರು.

Comments

Leave a Reply

Your email address will not be published. Required fields are marked *