ಮೋದಿ, ಬಿಎಸ್‍ವೈ ಸರ್ಕಾರ ರೈತರ ಪರ ಕೆಲಸ ಮಾಡ್ತಿದೆ: ಕಟೀಲ್

ರಾಯಚೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಇತ್ತೀಚೆಗೆ ನಿಧನರಾದ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿಗೆ ಮನೆಗೆ ನಳಿನ್ ಕುಮಾರ್ ಕಟೀಲ್ ಇಂದು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಳೀನ್‍ಗೆ ಬಿಜೆಪಿ ಮುಖಂಡರು ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಕಟೀಲ್, ಅಶೋಕ್ ಗಸ್ತಿ ಹಲವಾರು ವರ್ಷ ಪಾರ್ಟಿ ಕಟ್ಟಿದ್ದಾರೆ. ಅವರ ಕುಟುಂಬದೊಂದಿಗೆ ಪಕ್ಷವಿದೆ ಎಂದರು.

ಭೂಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆಗಳು ರೈತ ಪರವಾಗಿವೆ. ನಾನೂ ರೈತನಾಗಿದ್ದು, ರೈತನಿಗೆ ಅನುಕೂಲವಾಗುವ ಕಾಯ್ದೆಯಾಗಿದೆ. ರೈತನ ಹೆಸರಿನಲ್ಲಿ ಈಗ ಪ್ರತಿಭಟನೆ ಮಾಡುತ್ತಿದ್ದಾರೆ. ಮೋದಿ ಹಾಗೂ ಯಡಿಯೂರಪ್ಪ ಸರ್ಕಾರ ರೈತ ಪರವಾಗಿ ಕೆಲಸ ಮಾಡುತ್ತಿದೆ ಎಂದರು.

ಕೋವಿಡ್ 19 ಸೋಂಕಿಗೆ ಒಳಗಾಗಿ ಅಶೋಕ್ ಗಸ್ತಿ ಸೆಪ್ಟೆಂಬರ್ 17ರಂದು ನಿಧನರಾಗಿದ್ದರು. ಕೋವಿಡ್ 19 ಹಾಗೂ ನ್ಯುಮೋನಿಯಾದಿಂದ ಬಳುತ್ತಿದ್ದ ಅವರು ಸೆ.2 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ತಜ್ಞ ವೈದ್ಯರ ಸಮಿತಿಯ ನಿರಂತರ ವೀಕ್ಷಣೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹು-ಅಂಗಾಂಗ ವೈಫಲ್ಯದಿಂದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಎಬಿವಿಪಿಯಿಂದ ಶುರುವಾಗಿ ಆರ್ ಎಸ್ ಎಸ್ ನಲ್ಲಿ ಗುರುತಿಸಿಕೊಂಡಿದ್ದ ಗಸ್ತಿ ರಾಯಚೂರು ಬಳ್ಳಾರಿ ಕೊಪ್ಪಳ ಪ್ರಭಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಎರಡು ರಾಯಚೂರು ನಗರ ಕ್ಷೇತ್ರದ ಟಿಕೆಟ್ ಗೆ ಯತ್ನಿಸಿದ್ದರೂ ಸಿಕ್ಕಿರಲಿಲ್ಲ. ಬಿಜೆಪಿ ಹೈಕಮಾಂಡ್ ಅಶೋಕ್ ಗಸ್ತಿಯವರಿಗೆ ರಾಜ್ಯಸಭಾ ಟಿಕೆಟ್ ನೀಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಜುಲೈ 22 ರಂದು ಅಶೋಕ್ ಗಸ್ತಿ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

Comments

Leave a Reply

Your email address will not be published. Required fields are marked *