– ಕೊರೊನಾ ಹರಡುವಿಕೆಗೆ ಒಂದು ಸಮುದಾಯ ಗುರಿಯಾಗಬೇಕಾಗುತ್ತೆ
ನವದೆಹಲಿ: ಮೊಹರಂ ಮೆರವಣಿಗೆಗೆ ಅವಕಾಶ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಒಂದು ವೇಳೆ ಅನುಮತಿ ನೀಡಿದ್ರೆ ಕೊರೊನಾ ಹರಡುವಿಕೆಗೆ ಒಂದು ಸಮುದಾಯ ಗುರಿಯಾಗಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ದೇಶಾದ್ಯಂತ ಮೊಹರಂ ಮೆರವಣಿಗೆಗೆ ನಾವು ಅವಕಾಶ ಕಲ್ಪಿಸಿದರೆ ಅವ್ಯವಸ್ಥೆಯುಂಟಾಗಲಿದೆ. ಅಲ್ಲದೆ ಕೊರೊನಾ ಹರಡುವಿಕೆಗೆ ಒಂದು ನಿರ್ದಿಷ್ಟ ಸಮುದಾಯ ಗುರಿಯಾಗುವ ಸಾಧ್ಯತೆಗಳಿವೆ. ಇದು ನ್ಯಾಯಾಲಯಕ್ಕೆ ಸಮ್ಮತಿ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಹೇಳಿದ್ದಾರೆ.
ಒಡಿಶಾದಲ್ಲಿ ನಡೆದ ರಥಯಾತ್ರಗೆ ಅನುಮತಿ ನೀಡಿದ್ದ ಜೂನ್ ಆದೇಶವನ್ನು ಉಲ್ಲೇಖಿಸಿ ಉತ್ತರ ಪ್ರದೇಶದ ಸೈಯ್ಯದ್ ಕಲ್ಬೆ ಜವಾದ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು.

ನೀವು ಪುರಿ ಜಗನ್ನಾಥದ ರಥಯಾತ್ರೆ ಬಗ್ಗೆ ಹೇಳುತ್ತಿದ್ದಾರಾ, ಅದು ಒಂದೇ ಸ್ಥಳದಲ್ಲಿ, ಒಂದೇ ಮಾರ್ಗದಲ್ಲಿ ನಡೆದಿತ್ತು. ಇಂತಹ ಸಂದರ್ಭದಲ್ಲಿ ನಾವು ಅಪಾಯವನ್ನು ಅರಿಯಬಹುದಿತ್ತು. ಹೀಗಾಗಿ ಆದೇಶ ಹೊರಡಿಸಲಾಗಿತ್ತು. ಆದರೆ ನೀವು ಇಡೀ ದೇಶದಲ್ಲಿ ಮೆರವಣಿಗೆ ಮಾಡಲು ಸಾಮಾನ್ಯ ಆದೇಶ ನೀಡುವಂತೆ ಕೇಳುತ್ತಿದ್ದೀರಿ ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಹೇಳಿದರು.
ದೇಶದ ಎಲ್ಲ ಜನರ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡಲು ಸಾಧ್ಯವಿಲ್ಲ. ನೀವು ಒಂದೇ ಸ್ಥಳದಲ್ಲಿ ಮೆರವಣಿಗೆ ಮಾಡಲು ಕೇಳಿದ್ದರೆ, ಅಲ್ಲಿನ ಸ್ಥಿತಿಗತಿ ಅವಲೋಕಿಸಿ ಅಪಾಯವನ್ನು ಅರಿಯಬಹುದಿತ್ತು. ಇದೀಗ ಇಡೀ ದೇಶದಲ್ಲಿ ಮೆರವಣಿಗೆ ನಡೆಸಿದರೆ ಅಪಾಯ ಹೆಚ್ಚು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಇಷ್ಟಕ್ಕೆ ಸುಮ್ಮನಾಗದ ಅರ್ಜಿದಾರ, ಉತ್ತರ ಪ್ರದೇಶದ ರಾಜಧಾನಿಯಲ್ಲಿ ಶಿಯಾ ಸಮುದಾಯದ ಮುಸ್ಲಿಮರ ಸಂಖ್ಯೆ ಹೆಚ್ಚಿದ್ದು, ಕನಿಷ್ಟ ಲಕ್ನೋದಲ್ಲಾದರೂ ಅವಕಾಶ ನೀಡಿ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸುಪ್ರೀಂ ಕೋರ್ಟ್, ಅಲಹಬಾದ್ ಹೈ ಕೋರ್ಟ್‍ಗೆ ಹೋಗಿ ಅವಕಾಶ ಪಡೆಯಿರಿ ಎಂದು ಆದೇಶಿಸಿದೆ. ಕೊರೊನಾ ಹರಡುವಿಕೆ ಹಿನ್ನೆಲೆ ದೇಶಾದ್ಯಂತ ಧಾರ್ಮಿಕ, ರಾಜಕೀಯ ಸೇರಿದಂತೆ ಹೆಚ್ಚು ಜನ ಸೇರುವ ಎಲ್ಲ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ.

Leave a Reply