ಮೊಸಳೆ ಜೊತೆ ಕುಳಿತು ವ್ಯಕ್ತಿ ಮಾತುಕತೆ – ವಿಚಿತ್ರ ದೃಶ್ಯ ನೋಡಿ ಬೆಚ್ಚಿ ಬಿದ್ದ ಸ್ಥಳೀಯರು

ಗಾಂಧಿನಗರ: ಮೊಸಳೆ ಅಂದರೆ ಯಾರಿಗೆ ತಾನೇ ಭಯ ಇಲ್ಲ. ಮೊಸಳೆ ಹತ್ತಿರ ಹೋಗುವುದಕ್ಕೂ ಜನ ಹೆದರಿಕೊಳ್ಳುತ್ತಾರೆ. ಒಂದು ಬಾರಿ ಮೊಸಳೆ ಬಾಯಿಗೆ ಸಿಕ್ಕರೆ ಮತ್ತೆ ಮನುಷ್ಯ ಉಳಿಯುವುದೇ ಕಷ್ಟ. ಅಂತಹ ಭಯಾನಕ ಮೊಸಳೆಯೊಂದಿಗೆ ವ್ಯಕ್ತಿಯೊಬ್ಬ ಕುಳಿತು ಸ್ನೇಹದಿಂದ ಮಾತನಾಡುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನದಿ ಬಳಿ ಕುಳಿತಿದ್ದ ವ್ಯಕ್ತಿಯೊಬ್ಬ ತನ್ನ ಜೀವವನ್ನು ಲೆಕ್ಕಿಸದೇ ಮೊಸಳೆಗೆ ನಮಸ್ಕಾರ ಮಾಡಿ, ಅದನ್ನು ಮುಟ್ಟಿ ಅದರ ಜೊತೆ ತಾಳ್ಮೆಯಿಂದ ಮಾತನಾಡಿದ್ದಾನೆ. ಮೊಸಳೆ ಬಾಯಿಗೆ ಆತ ಆಹಾರವಾದರೆ ಎಂಬ ಆತಂಕದಿಂದ ಅಲ್ಲಿಂದ್ದ ಜನ ಆತನನ್ನು ಎದ್ದು ಹಿಂದಕ್ಕೆ ಬರುವಂತೆ ಕೂಗುತ್ತಿರುವುದು ವೀಡಿಯೋನಲ್ಲಿ ಕಂಡು ಬಂದಿದೆ.

ವೀಡಿಯೋದಲ್ಲಿರುವ ವ್ಯಕ್ತಿಯನ್ನು ಪಂಕಜ್ ಎಂದು ಗುರುತಿಸಲಾಗಿದ್ದು, ಗುಜರಾತ್‍ನ ವಡೋದರ ಮೂಲದವನಾಗಿದ್ದಾನೆ. ವೀಡಿಯೋನಲ್ಲಿ ಮೊಸಳೆ ಮೇಲೆ ತನ್ನ ಕೈಗಳಿಂದ ಸವರುತ್ತಾ ಅದನ್ನು ತನ್ನ ತಾಯಿ ಎಂದು ಕರೆಯುವ ಮೂಲಕ ನಮಸ್ಕರಿಸಿ ಯಾರಾದರೂ ನಿಮ್ಮನ್ನು ಕಲ್ಲಿನಿಂದ ಹೊಡೆದರೆ ನಿಮ್ಮ ಮಗ(ತನ್ನನ್ನು ಉಲ್ಲೇಖಿಸಿ) ಅವರನ್ನು ಸುಮ್ಮನೆ ಬಿಡುವುದಿಲ್ಲ ನಿಮ್ಮನ್ನು ಉಳಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡುತ್ತಾನೆ ಎಂದು ಹೇಳಿಕೊಂಡಿದ್ದಾನೆ.

ಈ ವೇಳೆ ಸ್ಥಳೀಯರು ಆತನನ್ನು ಎಷ್ಟೇ ಕರೆದರೂ ಬರದೇ ಕೊನೆಗೆ ಸ್ವಲ್ಪ ಸಮಯದ ನಂತರ ಅಲ್ಲಿಂದ ಎದ್ದು ಹಿಂದಕ್ಕೆ ಬಂದಿದ್ದಾನೆ. ಸದ್ಯ ಮೊಸಳೆಯಿಂದ ಆತನಿಗೆ ಯಾವುದೇ ಅಪಾಯವಾಗಲಿಲ್ಲ ಎಂದು ಅಲ್ಲಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *