ಮೊಬೈಲ್ ವಶಕ್ಕೆ ಪಡೆದಿಲ್ಲ, ಯಾವುದೇ ತಪ್ಪು ಮಾಡಿಲ್ಲ: ನಟಿ ರಶ್ಮಿತಾ ಚೆಂಗಪ್ಪ

-ಕೆಲಸ ಮಾಡಿದ್ರೆ ನಮಗೆ ದಿನದ ಸಂಬಳ ಸಿಗುತ್ತೆ

ಬೆಂಗಳೂರು: ವಿಚಾರಣೆ ವೇಳೆ ಪೊಲೀಸರು ನನ್ನ ಮೊಬೈಲ್ ವಶಕ್ಕೆ ಪಡೆದಿಲ್ಲ. ಪ್ರಕರಣದ ಬಗ್ಗೆ ಕೆಲ ಮಾಹಿತಿ ನಮ್ಮಿಂದ ಸಿಗುತ್ತಾ ಅನ್ನೋ ನಿರೀಕ್ಷೆಯಲ್ಲಿ ನನ್ನ ವಿಚಾರಣೆ ಕರೆಸಲಾಗಿತ್ತು ಎಂದು ಕಿರುತೆರೆ ನಟಿ ರಶ್ಮಿತಾ ಚೆಂಗಪ್ಪ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಶ್ಮಿತಾ ಚೆಂಗಪ್ಪ, ವಿಚಾರಣೆಗೆ ಕರೆದು ತಕ್ಷಣ ನಾವು ಆರೋಪಿಗಳಂತಲ್ಲ. ನಾನು ಈಗಾಗಲೇ ಒಂದು ವಿಚಾರಣೆಗೆ ಹಾಜರಾಗಿದ್ದೇನೆ. ಡ್ರಗ್ಸ್ ಮಾಫಿಯಾದ ಬಗ್ಗೆ ನಿಮಗೆ ಏನಾದ್ರೂ ಮಾಹಿತಿ ಇದೆಯಾ? ನೋಡಿದೀರಾ? ಎಂದು ತಿಳಿದುಕೊಳ್ಳಲು ನಮ್ಮನ್ನ ಕೇಳಲು ಪೊಲೀಸರು ಕರೆದಿದ್ದರು. ಇದನ್ನೂ ಓದಿ: ‘ಬ್ರಹ್ಮಗಂಟು’ ಗೀತಾ, ‘ಗಟ್ಟಿಮೇಳ’ ವಿಕ್ರಾಂತ್ ವಿಚಾರಣೆಗೆ ಹಾಜರ್

ಕಿರುತೆರೆಯ ಕಲಾವಿದರನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ನಾನು ಟಾಪ್ ಒನ್ ಸೀರಿಯಲ್ ನಲ್ಲಿ ನಟಿಸಿದ್ದೇನೆ. ಮುಂದೆ ಬೇರೆಯವರನ್ನ ಕರೆಯಬಹುದು ಅಥವಾ ಕರೆಯದಿರಬಹುದು. ನಮ್ಮ ಬಳಿ ಕೇಳಿದ ಮಾಹಿತಿಯನ್ನ ನೀಡಿ ಬಂದಿದ್ದೇನೆ. ಪೊಲೀಸರು ವಿಚಾರಣೆಗೆ ಕರೆದ ಮರುದಿನವೇ ಹೋಗಿ ಸ್ಪಷ್ಟನೆ ನೀಡಿ ಬಂದಿದ್ದೇನೆ. ನಮಗೆ ಆ ರೀತಿಯ ವ್ಯಕ್ತಿಗಳ ಜೊತೆ ಯಾವುದೇ ಸಂಪರ್ಕ ಸಹ ಇಲ್ಲ. ನಾನು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿಯೂ ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ನಮಗೆ ಆಗದವರು ನಮ್ಮ ಹೆಸರು ಹೇಳಿರ್ಬೋದು: ಗೀತಾಭಾರತಿ ಭಟ್‍

ವಿಚಾರಣೆಗೆ ಹಾಜರಾಗಬೇಕೆಂದಾಗ ಒಂದು ಕ್ಷಣ ಶಾಕ್ ಆಯ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮನ್ನು ವಿಚಾರಣೆಗೆ ಕರೆಯಲಾಗ್ತಿದೆ ಎಂದು ಹೇಳಿದರು. ಯಾವುದೇ ತಪ್ಪು ಮಾಡದೇ ಇರೋದರಿಂದ ಆರಾಮಾಗಿ ಹೋಗಿ ವಿಚಾರಣೆ ಎದುರಿಸಿ ಬಂದಿದ್ದೇನೆ. ಮತ್ತೆ ವಿಚಾರಣೆ ಕರೆಯಲಾಗುವುದು ಎಂದು ಹೇಳಿಲ್ಲ. ಒಂದು ವೇಳೆ ಕರೆಸಿದ್ರೆ ಹೋಗುತ್ತೇನೆ ಎಂದು ತಿಳಿಸಿದರು.

ನಾನು ಯಾವುದೇ ಪಾರ್ಟಿ, ಪಬ್ ಗಳಿಗೆ ಹೋಗಿಲ್ಲ. ಕೆಲಸ ಮಾಡುತ್ತಿದ್ದ ವಾಹಿನಿಯ ಇವೆಂಟ್ ಗಳಿಗೆ ಹೋಗಿದ್ದೇನೆ. ಭಾಗಿಯಾದ ಇವೆಂಟ್ ಗಳಲ್ಲಿ ಡ್ರಗ್ಸ್ ಸಂಬಂಧಿಸಿದಂತಹ ಯಾವುದೇ ಕೆಲಸಗಳು ನನ್ನ ಗಮನಕ್ಕೆ ಬಂದಿಲ್ಲ. ನಾವು ಇವಾಗ ಅಂಬೆಗಾಲಿಟ್ಟು ಸಿನಿಮಾ, ಕಿರುತೆರೆಯಲ್ಲಿ ಕೆಲಸ ಮಾಡಬೇಕೆಂದು ಬಂದಿದ್ದೇವೆ. ಪ್ರತಿದಿನ ಕೆಲಸ ಮಾಡಿದ್ರೆ ಮಾತ್ರ ನಮಗೆ ಒಂದು ದಿನದ ಸಂಬಳ ಸಿಗುತ್ತೆ. ನಮ್ಮ ಮೇಲೆ ಕುಟುಂಬಸ್ಥರು ಅವಲಂಬಿತರಾಗಿದ್ದು, ಜೊತೆಗೆ ನನ್ನನ್ನು ನಾನು ನೋಡಿಕೊಳ್ಳಬೇಕು. ಬ್ರಹ್ಮಗಂಟು ಗೀತಾ ಭಾರತಿ ಅವರನ್ನು ವಾಹಿನಿಯ ಇವೆಂಟ್ ಗಳಲ್ಲಿ ಭೇಟಿಯಾಗಿದ್ದೇನೆ. ಅಭಿಷೇಕ್ ದಾಸ್ ಜೊತೆ ಒಂದೇ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಿದ್ದೇನೆ. ಇದನ್ನೂ ಓದಿ: ಇಬ್ಬರು ಡ್ರಗ್ ಪೆಡ್ಲರ್‌ಗಳು ಅರೆಸ್ಟ್ – ಅಯ್ಯಪ್ಪ, ಲೂಸ್ ಮಾದ ಯೋಗಿ ವಿಚಾರಣೆ

ನನ್ನ ಮೊಬೈಲ್ ವಶಕ್ಕೆ ಪಡೆದಿಲ್ಲ. ಮೊಬೈಲ್ ಮತ್ತು ನನ್ನ ಕೆಲ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿದ್ದು, ಇದಕ್ಕಿಂತ ಹೆಚ್ಚಿನ ಮಾಹಿತಿ ನೀಡಲು ಆಗಲ್ಲ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *