ಮೊಬೈಲ್ ಬ್ಯಾಟರಿ ಸ್ಫೋಟ- 12 ವರ್ಷದ ಬಾಲಕ ದಾರುಣ ಸಾವು

ಲಕ್ನೋ: ಮುಖದ ಬಳಿ ಮೊಬೈಲ್ ಬ್ಯಾಟರಿ ಸ್ಫೋಟಗೊಂಡ ಪರಿಣಾಮ 12 ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ನಡೆದಿದೆ.

ಮಿರ್ಜಾಪುರ ಜಿಲ್ಲೆಯ ಹಳಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮತ್ವಾರ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಬಾಲಕ ‘ಜಡೂ ಚಾರ್ಜರ್’ ಮೂಲಕ ಬ್ಯಾಟರಿ ಚಾರ್ಜ್ ಮಾಡಿದ್ದಾನೆ ಬಳಿಕ ಎಷ್ಟು ಚಾರ್ಜ್ ಆಗಿದೆ ಎಂಬುದನ್ನು ಟೆಸ್ಟ್ ಮಾಡುವಾಗ ಈ ಅವಘಡ ಸಂಭವಿಸಿದೆ. ಸಾವನ್ನಪ್ಪಿದ ವಿದ್ಯಾರ್ಥಿಯನ್ನು 6ನೇ ತರಗತಿಯ ಮೋನು ಎಂದು ಗುರುತಿಸಲಾಗಿದ್ದು, ಮುಖದ ಬಳಿಯೇ ಬ್ಯಾಟರಿ ಸ್ಫೋಟಗೊಂಡಿದ್ದರಿಂದ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಹೀಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಶುಕ್ರವಾರ ಬೆಳಗ್ಗೆ 10 ಗಂಟೆಗೆ ಮೋನು ‘ಜಡೂ ಚಾರ್ಜರ್’ನಲ್ಲಿ ಮೊಬೈಲ್ ಚಾರ್ಜ್‍ಗೆ ಹಾಕಿದ್ದಾನೆ. ಒಂದು ಗಂಟೆ ಬಳಿಕ ಎಷ್ಟು ಚಾರ್ಜ್ ಆಗಿದೆ ಎಂಬುದನ್ನು ಚೆಕ್ ಮಾಡಲು ಬಾಲಕ ನಾಲಿಗೆಗೆ ಬಾಟರಿಯನ್ನು ಮುಟ್ಟಿಸಿದ್ದಾನೆ. ತಕ್ಷಣವೇ ಬ್ಯಾಟರಿ ಸ್ಫೋಟಗೊಂಡಿದ್ದು, ಮುಖಕ್ಕೆ ಗಂಭೀರ ಗಾಯಗಳಾಗಿವೆ.

ಈ ಕುರಿತು ತಿಳಿಯುತ್ತಿದ್ದಂತೆ ಕುಟುಂಬದ ಸದಸ್ಯರು ಬಾಲಕನ ರೂಂಗೆ ಧಾವಿಸಿದ್ದು, ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ ತಕ್ಷಣವೇ ಮತ್ವಾರ್‍ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಬಾಲಕ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪೋಷಕರು ಪೊಲೀಸರಿಗೆ ಮಾಹಿತಿ ನೀಡದೆ ಬಾಲಕನ ಅಂತ್ಯಸಂಸ್ಕಾರ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *