ಮೊಬೈಲ್ ಕಸಿದುಕೊಂಡಿದ್ದಕ್ಕೆ ಫಜೀತಿ ಸೃಷ್ಟಿಸಿದ ವಿದ್ಯಾರ್ಥಿ

– ಗಾಜು ಒಡೆದು ಬಾತ್ ರೂಮಿಗೆ ಎಂಟ್ರಿ

ಉಡುಪಿ: ದಿನಪೂರ್ತಿ ಇಂಟರ್ನೆಟ್ ನಲ್ಲಿ ಇರಬೇಡ ಎಂದು ತಾಯಿ ಬೈದರೆಂದು ವಿದ್ಯಾರ್ಥಿಯೊಬ್ಬ ಬಾತ್ ರೂಮ್ ಬಾಗಿಲು ಹಾಕಿಕೊಂಡು ಗಂಟೆಗಟ್ಟಲೆ ಹೊರಗೆ ಬಾರದೆ ಅವಾಂತರ ಸೃಷ್ಟಿಸಿದ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ.

ಮಣಿಪಾಲದ ಎಂಐಟಿ ಕ್ಯಾಂಪಸ್ ಪಕ್ಕದ ಎಒನ್ ಅಪಾರ್ಟ್‍ಮೆಂಟ್‍ನಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತಾಯಿ ಮೊಬೈಲ್ ಕಿತ್ತುಕೊಂಡರು ಎಂದು ವಿದ್ಯಾರ್ಥಿಯೊಬ್ಬ ಬಾತ್ ರೂಮ್ ಸೇರಿಕೊಂಡು ಒಳಗಿಂದ ಬಾಗಿಲು ಹಾಕಿಕೊಂಡಿದ್ದ. ಎಷ್ಟೇ ಬಾಗಿಲು ತಟ್ಟಿದರೂ, ಮನವಿ ಮಾಡಿದರೂ ಬಾಗಿಲು ತೆರೆಯದಿದ್ದಾಗ ದಿಕ್ಕುತೋಚದೆ ಅಮ್ಮ ಅಗ್ನಿಶಾಮಕ ದಳಕ್ಕೆ ಫೋನ್ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮಣಿಪಾಲಕ್ಕೆ ತೆರಳಿ ಬಾಗಿಲು ತೆರೆಯುವಂತೆ ವಿನಂತಿ ಮಾಡಿಕೊಂಡಿದ್ದಾರೆ.

ವಿದ್ಯಾರ್ಥಿ ಬಾಗಿಲು ತೆರೆಯದಿದ್ದಾಗ ಅಗ್ನಿಶಾಮಕ ಸಿಬ್ಬಂದಿ ಅಪಾರ್ಟ್‍ಮೆಂಟ್‍ನ ಟೆರಸ್ ಹತ್ತಿ, ಕಿಟಕಿ ಪಕ್ಕ ಇಳಿದು ಬಾತ್ ರೂಮ್ ನ ಕಿಟಕಿ ಗಾಜು ಮುರಿದು ಒಳಗೆ ಪ್ರವೇಶಿಸಿದ್ದಾರೆ. 17 ವರ್ಷದ ವಿದ್ಯಾರ್ಥಿಯನ್ನು ಹೊರಗೆ ತಂದಿದ್ದಾರೆ. ಫೈರ್ ಡಿಎಫ್‍ಒ ವಸಂತ್ ಕುಮಾರ್ ನೇತೃತ್ವದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಪ್ರಭುದೇವ ಮಾಣೆ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಿಎಫ್‍ಒ ವಸಂತ್ ಕುಮಾರ್, ಫೋನ್ ಕರೆ ಬಂದ 10 ನಿಮಿಷಕ್ಕೆ ನಮ್ಮ ತಂಡ ತೆರಳಿತ್ತು. ಯಾವುದೇ ಸಮಸ್ಯೆ ಆಗದಂತೆ ಆಪರೇಷನ್ ಮಾಡಿದ್ದೇವೆ. ಕುಟುಂಬ ನಿಟ್ಟುಸಿರು ಬಿಟ್ಟಿದೆ ಎಂದರು. ಮಣಿಪಾಲ ಸೆಕ್ಯೂರಿಟಿ ಮುಖ್ಯಸ್ಥ ಪ್ರಭುದೇವ ಮಾಣೆ ಮಾತನಾಡಿ, ಎಲ್ಲ ಉನ್ನತ ಅಧಿಕಾರಿಗಳು ಸ್ಥಳದಲ್ಲಿದ್ದು ಕಾರ್ಯಾಚರಣೆಗೆ ಸಹಕರಿಸಿದೆವು. ಅಗ್ನಿಶಾಮಕ ಸಿಬ್ಬಂದಿ ಬಾತ್ ರೂಮ್ ಪ್ರವೇಶಿಸಿದಾಗ ವಿದ್ಯಾರ್ಥಿ ತಬ್ಬಿಬ್ಬಾಗಿದ್ದಾನೆ. ಆಮೇಲೆ ನಾವೆಲ್ಲ ಬುದ್ಧಿವಾದ ಹೇಳಿದ್ದೇವೆ. ಸಂಪೂರ್ಣವಾಗಿ ಇಂಟರ್ನೆಟ್ ಗೆ ಒಗ್ಗಿಕೊಂಡಾಗ ಹೀಗಾಗುತ್ತದೆ. ಪೋಷಕರು ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸುವುದು ಕೂಡ ಬಹಳ ಮುಖ್ಯವಾಗುತ್ತದೆ ಎಂದರು.

Comments

Leave a Reply

Your email address will not be published. Required fields are marked *