ಮೊದಲ ಕೊರೊನಾ ರೋಗಿ ಕಾಣಿಸಿಕೊಂಡು ಇಂದಿಗೆ ಒಂದು ವರ್ಷ

ಬೀಜಿಂಗ್: ಚೀನಾದಲ್ಲಿ ಮೊದಲ ಕೊರೊನಾ ಸೋಂಕಿತ ಕಾಣಿಸಿಕೊಂಡು ಇಂದಿಗೆ ಬರೋಬ್ಬರಿ ಒಂದು ವರ್ಷವಾಗಿದೆ. ನವೆಂಬರ್ 17, 2019ರಂದು ವುಹಾನ್ ನಗರದ ಹುಬೈ ಪ್ರಾಂತ್ಯದ 55 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.

ಅಂದು ಕಾಣಿಸಿಕೊಂಡು ರಾಕ್ಷಸಿ ಕೊರೊನಾ ಇಡೀ ವಿಶ್ವವನ್ನೇ ಅಲುಗಾಡಿಸುತ್ತಿದೆ. ಇಂದಿಗೂ ಕೊರೊನಾದ ಕರಿ ನೆರಳ ಭಯದಲ್ಲಿ ಜೀವನ ನಡೆಸುವಂತಾಗಿದೆ. ಕೊರೊನಾ ವೈರಸ್ ಕಾಣಿಸಿಕೊಂಡು ವರ್ಷವಾದ್ರೂ ಮಾಹಾಮಾರಿಗೆ ಔಷಧಿ ಲಭ್ಯವಾಗಿಲ್ಲ. ಇದುವರೆಗೂ ವಿಶ್ವದಲ್ಲಿ 10.25 ಲಕ್ಷಕ್ಕೂ ಅಧಿಕ ಜನರು ಕೊರೊನಾಗೆ ಬಲಿಯಾಗಿದ್ದು, ಇಡೀ ಪ್ರಪಂಚ ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಜಪ ಪಠಿಸುವಂತಾಗಿದೆ.

ಚೀನಾದ ಅಧಿಕಾರಿಗಳು ಡಿಸೆಂಬರ್ 8ರವರೆಗೂ ಕೊರೊನಾ ವೈರಸ್ ಮೊದಲ ಪ್ರಕರಣ ಪತ್ತೆ ಮಾಡಿರಲಿಲ್ಲ. ಮೊದಲ ರೋಗಿ ಪತ್ತೆಯಾದ ವಾರದ ಬಳಿಕ ವುಹಾನ್ ನಗರ 12ಕ್ಕೂ ಅಧಿಕ ಮೆಡಿಕಲ್ ಸಿಬ್ಬಂದಿಯಲ್ಲಿ ತೀವ್ರ ಜ್ವರ, ಬಳಲಿಕೆ, ಕೆಮ್ಮು ಸೇರಿದಂತೆ ಶೀತದ ಲಕ್ಷಣಗಳು ಕಾಣಿಸಿಕೊಂಡು ಅನಾರೋಗ್ಯಕ್ಕೆ ತುತ್ತಾಗಿದ್ದರು.

ನವೆಂಬರ್ 17ರಂದು ಮೊದಲ ರೋಗಿ ಬಳಿಕ ನಂತ್ರ ಸಾಲು ಸಾಲು ಐವರಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದಿದ್ದವು. ಆರಂಭದಲ್ಲಿ ಚೀನಿ ವೈದ್ಯರು ಸಾಮಾನ್ಯ ಜ್ವರ ಅಂತ ತಿಳಿದು ಚಿಕಿತ್ಸೆ ನೀಡಿದ್ದರು. ಡಿಸೆಂಬರ್ 15ಕ್ಕೆ ಒಂದೇ ಲಕ್ಷಣದ ರೋಗಿಗಳ ಸಂಖ್ಯೆ 27ಕ್ಕೆ ಏರಿಕೆಯಾಗಿತ್ತು. ಡಿಸೆಂಬರ್ 20ಕ್ಕೆ ಸೋಂಕಿತರ ಸಂಖ್ಯೆ 60ಕ್ಕೆ ಏರಿಕೆಯಾಗಿ ಇಡೀ ಹುಬೈ ನಗರ ಬೆಚ್ಚಿ ಬಿದ್ದಿತ್ತು. ಡಿಸೆಂಬರ್ 27ರಂದು ಹುಬೈ ಆಸ್ಪತ್ರೆಯ ಡಾ.ಜ್ಯಾಂಗ್ ಜಿಕ್ಸಿಯಾನ್ ಕೊರೊನಾ ಹೆಸರಿನ ವೈರಸ್ ಸೋಂಕಿನಿಂದ ಜನರು ಆನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಹೇಳಿದ್ದರು. ವೈದ್ಯರ ಘೋಷಣೆ ವೇಳೆ ಸೋಂಕಿತರ ಸಂಖ್ಯೆ 180ರ ಗಡಿ ದಾಟಿ ಮುನ್ನುಗ್ಗುತ್ತಿತ್ತು. ಇದಾದ ಬಳಿಕ ಚೀನಾ ಲಾಕ್‍ಡೌನ್ ತಂತ್ರದ ಮೊರೆ ಹೋಗಿತ್ತು. ಅದಾಗಿಯೂ ಕೊರೊನಾ ದೇಶದ ಗಡಿ ದಾಟಿ ಸಂಚರಿಸಿ ರಣಕೇಕೆ ಹಾಕುತ್ತಿದೆ.

Comments

Leave a Reply

Your email address will not be published. Required fields are marked *