ಮೈಸೂರು ಪೊಲೀಸರ ಬೆನ್ನೇರಿದ ಹೆಮ್ಮಾರಿ- 23 ಮಂದಿ ಖಾಕಿಗಳಿಗೆ ಸೋಂಕು

– ನಂಜನಗೂಡು ಠಾಣೆ, ಡಿವೈಎಸ್‍ಪಿ ಕಚೇರಿ ಸೀಲ್‍ಡೌಲ್

ಮೈಸೂರು: ಕೊರೊನಾ ಮುಕ್ತ ಆಯ್ತು ಅಂತ ನಿಟ್ಟುಸಿರು ಬಿಡುವ ಸಮಯದಲ್ಲಿ ಮತ್ತೆ ಮೈಸೂರಿನಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಸದ್ಯ ಡೆಡ್ಲಿ ವೈರಸ್ ಮೈಸೂರು ಪೊಲೀಸರ ಬೆನ್ನತ್ತಿದೆ.

ಬೆಂಗಳೂರು ಪೊಲೀಸರಷ್ಟೇ ಅಲ್ಲ. ಮೈಸೂರು ಪೊಲೀಸರಿಗೂ ಕೊರೊನಾ ಸೋಂಕು ಬಂದಿದೆ. ಇಲ್ಲಿವರೆಗೂ ಮೈಸೂರು ಜಿಲ್ಲೆಯೊಂದರಲ್ಲೇ 23 ಮಂದಿ ಪೊಲೀಸರು ಸೋಂಕು ಬಾಧಿತರಾಗಿದ್ದಾರೆ. ಜ್ಯುಬಿಲಿಯಂಟ್ ಕೊರೊನಾ ಮುಕ್ತವಾದ ಬಳಿಕ ಇಡೀ ಮೈಸೂರು ನೆಮ್ಮದಿ ನಿಟ್ಟುಸಿರು ಬಿಟ್ಟಿತ್ತು. ಅಷ್ಟರಲ್ಲೆ ಕಿಲ್ಲರ್ ಕೊರೊನಾ ಪೊಲೀಸರ ಹೆಗಲೇರಿ ಕುಳಿತುಬಿಟ್ಟಿದೆ.

ನಂಜನಗೂಡು ಗ್ರಾಮಾಂತರ ಠಾಣೆಯ ಕಾನ್ಸ್​​ಟೇಬಲ್​ಗೂ ಕೊರೊನಾ ಪಾಸಿಟಿವ್ ಬಂದಿದೆ. ಈ ಪೇದೆಯ ಪ್ರಾಥಮಿಕ ಸಂಪರ್ಕದಲ್ಲಿ ಅಡಿಷನಲ್ ಎಸ್‍ಪಿ ಸ್ನೇಹ ಸೇರಿ 22 ಜನ ಅಧಿಕಾರಿಗಳು ಇದ್ದಾರೆ. ಇವರೆಲ್ಲರ ಗಂಟಲು ದ್ರವ ಸಂಗ್ರಹಣೆ ಮಾಡಿ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ಎಲ್ಲರೂ ಈಗ ಕ್ವಾರಂಟೈನ್‍ನಲ್ಲಿದ್ದಾರೆ.

ಎಸ್‍ಪಿ ರಿಷ್ಯಂತ್ ಸೇರಿ 36 ಜನರು ಸೆಕೆಂಡರಿ ಸಂಪರ್ಕದಲ್ಲಿದ್ದಾರೆ. ಇವರಲ್ಲಿ ಈಗ ಆತಂಕ ಮನೆ ಮಾಡಿದೆ. ಮೈಸೂರಿನ ಟಿ. ನರಸೀಪುರದ ಪೊಲೀಸ್ ಠಾಣೆಯಲ್ಲಿ ಬುಲೆಟ್ ನಾಪತ್ತೆಯಾಗಿತ್ತು. ಇದರ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಈ ತಂಡದಲ್ಲಿ ಪೇದೆಗೆ ಸೋಂಕು ದೃಢವಾಗಿದೆ. ಹೀಗಾಗಿ ತಂಡದಲ್ಲಿದ್ದ ಅಧಿಕಾರಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.

ನಂಜನಗೂಡು ಠಾಣೆ, ಡಿವೈಎಸ್‍ಪಿ ಕಚೇರಿ ಸೀಲ್‍ಡೌನ್!
ಸೋಂಕಿತ ಕಾನ್ಸ್​​ಟೇಬಲ್​ನಿಂದ ನಂಜನಗೂಡಿನ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಡಿವೈಎಸ್‍ಪಿ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಹಾಗೇ ಗ್ರಾಮಾಂತರ ಪೊಲೀಸ್ ಠಾಣೆಯ ಹಿಂಬದಿಯಲ್ಲಿರುವ ನಾಲ್ಕು ಪೋಲಿಸ್ ಕ್ವಾಟರ್ಸ್ ನಲ್ಲಿದ್ದವರನ್ನು ಹೊಂ ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಕಾರ್ಯವೈಖರಿಯನ್ನು ತಾತ್ಕಾಲಿಕವಾಗಿ ಪಟ್ಟಣ ಪೊಲೀಸ್ ಠಾಣೆಗೆ ಸ್ಥಳಾಂತರ ಮಾಡಲಾಗಿದೆ.

Comments

Leave a Reply

Your email address will not be published. Required fields are marked *