ಮೈಸೂರು ಡಿಸಿ ರೋಹಿಣಿ ಸಿಂಧೂರಿ ಕೊರೊನಾ ಟಫ್ ರೂಲ್ಸ್ ಜಾರಿಗೆ ಕೊಕ್ಕೆ ಹಾಕಿದ ಸರ್ಕಾರ

ಬೆಂಗಳೂರು/ ಮೈಸೂರು: ಕೊರೋನಾ ನಿಯಂತ್ರಣ ವಿಚಾರದಲ್ಲಿ ಸರ್ಕಾರ ಪ್ರತಿಷ್ಠೆಗೇನಾದ್ರೂ ಬಿದ್ದಿದ್ಯಾ? ಇಂದು ನಡೆದ ಬೆಳವಣಿಗೆಯಿಂದ ಈ ಅನುಮಾನದ ಪ್ರಶ್ನೆ ಎದ್ದಿದೆ.

ಇತ್ತೀಚಿಗೆ ಕೇಂದ್ರ ಸರ್ಕಾರ ಪ್ರಕಟಿಸಿದ್ದ ಮಾರ್ಗಸೂಚಿಯಲ್ಲಿ ಅಗತ್ಯಬಿದ್ರೆ ಜಿಲ್ಲಾಡಳಿತಗಳು ಟಫ್ ರೂಲ್ಸ್ ಜಾರಿ ಮಾಡಬಹುದು ಎಂದಿತ್ತು. ಅದ್ರಂತೆ ಮೈಸೂರು ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕಾಗಿ ಇಂದು ಮಧ್ಯಾಹ್ನ 10 ದಿನಗಳ ಮಟ್ಟಿಗೆ ಟಫ್ ರೂಲ್ಸ್ ಪ್ರಕಟಿಸಿದ್ರು. ಆದರೆ ಈ ಕಠಿಣ ನಿಯಮಕ್ಕೆ ಸರ್ಕಾರ ಕೊಕ್ಕೆ ಹಾಕಿದೆ.

ಜಿಲ್ಲೆಗಳು ಪ್ರತ್ಯೇಕವಾಗಿ ಮಾರ್ಗಸೂಚಿ ಹೊರಡಿಸುವಂತಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳ ಸೂಚನೆಯನ್ನು ಮಾತ್ರ ಕಟ್ಟುನಿಟ್ಟಾಗಿ ಪಾಲಿಸಬೇಕು. ಕೂಡಲೇ ಆದೇಶ ಹಿಂಪಡೆಯಬೇಕು ಎಂದು ವಿಪತ್ತು ನಿರ್ವಹಣಾ ಕಾರ್ಯಕಾರಿ ಸಮಿತಿ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸುತ್ತೋಲೆ ಹೊರಡಿಸಿದ್ದಾರೆ.

ಮೈಸೂರು ನಗರಿಯಲ್ಲಿ ದಿನೇ ದಿನೇ ಹೊಸ ಕೇಸ್‍ಗಳು ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ ಡಿಸಿ ಸಿಂಧೂರಿ ಹಲವು ಬಿಗಿ ಕ್ರಮ ಕೈಗೊಂಡಿದ್ದರು. ಮೈಸೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಕೊರೋನಾ ನೆಗೆಟೀವ್ ರಿಪೋರ್ಟನ್ನು ಕಡ್ಡಾಯವಾಗಿ ತರಬೇಕು ಎಂದು ಆದೇಶಿಸಿದ್ರು.

ಬೆಂಗಳೂರಿಂದ ಬರುವವರು ನೆಗೆಟೀವ್ ರಿಪೋರ್ಟ್ ತನ್ನಿ ಎಂದಿದ್ದ ಜಿಲ್ಲಾಧಿಕಾರಿ ಇದು ಮನವಿ ಅಷ್ಟೇ. ಕಡ್ಡಾಯವಲ್ಲ ಅಂತಾ ಸ್ಪಷ್ಟಪಡಿಸಿದ್ರು. ಸಭೆ ಸಮಾರಂಭ, ಮದುವೆಗಳಿಗೆ ಕಡ್ಡಾಯ ಅನುಮತಿ ಪಡೆಯಬೇಕು. ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವವರು ಕಡ್ಡಾಯವಾಗಿ ನೆಗೆಟೀವ್ ರಿಪೋರ್ಟ್ ಹಾಜರುಪಡಿಸಬೇಕು ಎಂದು ಸೂಚಿಸಿದ್ರು.

ಥಿಯೇಟರ್ ವಿಚಾರದಲ್ಲಿ ಡಿಸಿ ತೆಗೆದುಕೊಂಡ ತೆಗೆದುಕೊಂಡ ಕಠಿಣ ನಿಲುವನ್ನು ಮಾಲೀಕರು ಆಕ್ಷೇಪಿಸಿದ್ರು. ಇದೊಂಥರಾ ಲಾಕ್‍ಡೌನ್ ರೀತಿಯಲ್ಲೇ ಆದೇಶವಿದೆ. ಹೀಗಾದ್ರೆ ಥಿಯೇಟರ್ ಕಡೆ ಯಾರು ಬರ್ತಾರೆ? ದಯವಿಟ್ಟು ಈ ಆದೇಶ ವಾಪಸ್ ಪಡೀಬೇಕು ಎಂದು ಡಿಸಿಯಲ್ಲಿ ಮನವಿ ಮಾಡ್ಕೊಂಡಿದ್ದರು. ಈ ಬೆನ್ನಲ್ಲೇ ಸರ್ಕಾರ, ಡಿಸಿ ಆದೇಶಕ್ಕೆ ತಡೆ ನೀಡಿದೆ.

ಯುಗಾದಿ ಹಬ್ಬದ ಕಾರಣ ಮೂರು ದಿನಗಳ ಮಟ್ಟಿಗೆ ದೇವರಾಜ ಮಾರುಕಟ್ಟೆಯನ್ನು ರೈಲ್ವೇ ನಿಲ್ದಾಣದ ಬಳಿಯ ಜೆಕೆ ಗ್ರೌಂಡ್‍ಗೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. ಏಪ್ರಿಲ್ 11ರಿಂದ ಮೂರು ದಿನಗಳ ಕಾಲ ಜೆಕೆ ಗ್ರೌಂಡ್‍ನಲ್ಲಿ ಹಬ್ಬದ ವಹಿವಾಟು ನಡೆಯಲಿದೆ.

Comments

Leave a Reply

Your email address will not be published. Required fields are marked *