ಮೇ 29ರ ಬದಲು ಜೂನ್ 4ಕ್ಕೆ ಕೊಡಗು ಸಂತ್ರಸ್ತರಿಗೆ ಮನೆ ಹಸ್ತಾಂತರ: ವಿ ಸೋಮಣ್ಣ

ಮಡಿಕೇರಿ: 2018ರ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನಿರ್ಮಾಣ ಮಾಡಿರುವ ಮನೆಗಳ ಹಸ್ತಾಂತರ ಕಾರ್ಯ ಮತ್ತೊಂದು ವಾರ ತಡವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ವಿ ಸೋಮಣ್ಣ, ಲಾಕ್‍ಡೌನ್ ಮುಂದುವರೆಯುವ ಬಗ್ಗೆ ಪ್ಲಾನ್ ಇರಲಿಲ್ಲ. ಹೀಗಾಗಿ ಮೇ 29ರಂದು ಸಂತ್ರಸ್ತರಿಗೆ ಮನೆ ಹಸ್ತಾಂತರಿಸಲು ನಿರ್ಧರಿಸಲಾಗಿತ್ತು. ಆದರೆ ಲಾಕ್‍ಡೌನ್ ಮೇ ಕೊನೆಯವರೆಗೆ ಇರುವುದರಿಂದ ಜೂನ್ 4ರಂದು ಮನೆ ಹಸ್ತಾಂತರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದು ಸಂತ್ರಸ್ತರ ಒತ್ತಾಯ ಇದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರೋಟೋಕಾಲ್ ಪ್ರಕಾರ ಯಾರನ್ನೆಲ್ಲ ಕರೆಯಲು ಸಾಧ್ಯವಿದೆಯೋ ಅವರನ್ನು ಕರೆಯಲಾಗುವುದು ಅಷ್ಟೇ ಎಂದು ಹೇಳಿದರು. ಈ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಆಹ್ವಾನಿಸುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದರು.

ಸಂತ್ರಸ್ತರಿಗೆ ನಿರ್ಮಾಣ ಮಾಡಿರುವ ಮನೆಗಳ ಕಾಮಗಾರಿ ಕಳಪೆ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸೋಮಣ್ಣ, ಸಾವಿರಾರು ಮನೆಗಳ ನಿರ್ಮಾಣ ಮಾಡುವಾಗ ಯಾವುದೋ ಒಂದು ಮನೆಯ ಕೆಲಸದಲ್ಲಿ ಚಿಕ್ಕಪುಟ್ಟ ವ್ಯತ್ಯಾಸ ಆಗಿರಬಹುದು. ಆದರೆ ಇದನ್ನೇ ಉದ್ದೇಶ ಪೂರ್ವಕವಾಗಿ ಸರ್ಕಾರದ ವಿರುದ್ಧ ಆರೋಪಿಸಲಾಗುತ್ತಿದೆ. ಒಂದು ವೇಳೆ ಹಾಗೇ ಕಳಪೆಯಾಗಿದ್ದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದರು.

Comments

Leave a Reply

Your email address will not be published. Required fields are marked *