ಮೇಲುಕೋಟೆಗೆ ಆಗಮಿಸಿ ಹರಕೆ ತೀರಿಸಿದ ಮಧ್ಯಪ್ರದೇಶ ಸಿಎಂ

ಮಂಡ್ಯ: ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಗೆ ಇಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭೇಟಿ ನೀಡಿದ್ದರು. ಕುಟುಂಬ ಸಮೇತರಾಗಿ ಆಗಮಿಸಿದ್ದ ಮುಖ್ಯಮಂತ್ರಿಗಳು, ಇಷ್ಟಾರ್ಥ ಸಿದ್ಧಿಸಿದ ಚೆಲುವನಾರಾಯಣಸ್ವಾಮಿ ಹಾಗೂ ಯೋಗನರಸಿಂಹಸ್ವಾಮಿಗೆ ತಮ್ಮ ಹರಕೆ ಪೂಜೆ ಸಲ್ಲಿಸಿದ್ದರು.

ಚೌಹಾಣ್ ವಿರೋಧ ಪಕ್ಷದ ನಾಯಕರಾಗಿದ್ದಾಗ, ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಹಾಗೂ ಯೋಗನರಸಿಂಹಸ್ವಾಮಿ ದರ್ಶನ ಮಾಡಿದರೆ ಮತ್ತೊಮ್ಮೆ ಮುಖ್ಯಮಂತ್ರಿ ಗಾಧಿಗೇರುತ್ತೀರಿ ಎಂದು ಆಂಧ್ರ ಪ್ರದೇಶದ ಖ್ಯಾತ ಶ್ರೀವೈಷ್ಣವ ಯತಿಗಳಾದ ತ್ರಿದಂಡಿ ಶ್ರೀಮನ್ನಾರಾಯಣ ಚಿನ್ನಜೀಯರ್ ಸ್ವಾಮೀಜಿ ಸಲಹೆ ನೀಡಿದ್ದರು. ಅದರಂತೆ ಕಳೆದ ವರ್ಷದ ನವೆಂಬರ್‍ನಲ್ಲಿ ಪತ್ನಿ ಜೊತೆ ಮೇಲುಕೋಟೆಗೆ ಭೇಟಿ ನೀಡಿದ್ದರು.

ಬಳಿಕ ನಡೆದ ರಾಜಕೀಯ ಮೇಲಾಟದಲ್ಲಿ ಚೌಹಾಣ್ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರಿದ್ದರು. ಈ ಹಿನ್ನೆಲೆಯಲ್ಲಿ ಜೂನ್ 26ರಂದು ಮೇಲುಕೋಟೆಗೆ ಬಂದು ಹರಕೆ ತೀರಿಸಿ, ಉಪ ಚುನಾವಣೆಯಲ್ಲಿ ಸ್ಪಷ್ಟ ಬಹುಮತಕ್ಕೆ ಅಗತ್ಯವಾದ ಸ್ಥಾನ ಗೆಲ್ಲಿಸುವಂತೆ ಮತ್ತೊಮ್ಮೆ ಹರಕೆ ಹೊತ್ತಿಕೊಂಡಿದ್ದರು. ಅದರಂತೆ ಇತ್ತೀಚೆಗೆ ನಡೆದ ಬೈ ಎಲೆಕ್ಷನ್‍ನಲ್ಲಿ 19 ಸೀಟುಗಳು ಬಿಜೆಪಿ ಪಾಲಾಗಿದ್ದು, ಚೌಹಾಣ್ ಸರ್ಕಾರ ಸುಭದ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ತಮ್ಮ ಕುಟುಂಬಸ್ಥರ ಜೊತೆ ಭೇಟಿ ನೀಡಿ ದೇವರ ದರ್ಶನ ಪಡೆದು ಕೃತಾರ್ಥರಾದರು.

ಮಧ್ಯಾಹ್ನ 2.50ರ ಸುಮಾರಿಗೆ ಮೇಲುಕೋಟೆಗೆ ಆಗಮಿಸಿದ ಚೌಹಾಣ್‍ಗೆ ಮಂಡ್ಯ ಡಿಸಿ ಡಾ.ವೆಂಕಟೇಶ್ ನೇತೃತ್ವದಲ್ಲಿ ಜಿಲ್ಲಾಡಳಿತದಿಂದ ಹೂಗುಚ್ಚ ನೀಡಿ ಬರಮಾಡಿಕೊಳ್ಳಲಾಯಿತು. ಬಳಿಕ ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಸ್ವೀಕರಿಸಿದ ಚೌಹಾಣ್ ಮೊದಲು ಮೇಲುಕೋಟೆಯ ಜೀಯರ್ ಮಠಕ್ಕೆ ಭೇಟಿ ನೀಡಿ ಅಲ್ಲಿನ ಆತಿಥ್ಯ ಸ್ವೀಕರಿಸಿದರು. ನಂತರ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಹಾಗೂ ಬೆಟ್ಟದ ಮೇಲಿನ ಯೋಗನರಸಿಂಹಸ್ವಾಮಿ ದರ್ಶನ ಮಾಡಿದರು. ಈ ವೇಳೆ ದೇವರಿಗೆ ಬೆಳ್ಳಿ ರಥ ಮಾಡಿಸಿಕೊಡಿ ಎಂಬ ದೇವಾಲಯದ ಆಡಳಿತ ವರ್ಗದ ಮನವಿಗೆ ಸ್ಪಂದಿಸಿದ ಚೌಹಾಣ್ ಕೆಲದಿನಗಳಲ್ಲಿ ಬೆಳ್ಳಿರಥ ನೀಡುವುದಾಗಿ ಒಪ್ಪಿದರು.

ದೇವರ ದರ್ಶನ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್, ದೇಶದ ಒಳಿತಿಗಾಗಿ ಪ್ರಾರ್ಥಿಸಿದ್ದೇನೆ. ಕೊರೊನಾ ಮಹಾಮಾರಿ ತೊಲಗಿ ಜನರಲ್ಲಿ ಸಂತೋಷ ಬರಲಿ. ಭಗವಂತನ ಆಜ್ಞೆ ಇಲ್ಲದೆ ಏನು ಆಗಲ್ಲ. ಆ ದೇವರ ಕೃಪೆಯಿಂದಲೇ ಸಿಎಂ ಆಗಿದ್ದೇನೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *