ಮೂವರು ಪತ್ನಿಯರಿಗೆ ಆಸ್ತಿ ಹಂಚಿಕೆ ಭಯ- 6 ಲಕ್ಷ ಸುಪಾರಿ ಕೊಟ್ಟು ಮೊದ್ಲ ಪತ್ನಿಯಿಂದ ಕೊಲೆ

– ಕೊಲೆ ಮಾಡಿದ 6 ದಿನದಲ್ಲಿ ಆರೋಪಿಗಳು ಅರೆಸ್ಟ್
– 3 ವರ್ಷದಲ್ಲಿ ಮೂರು ವಿವಾಹ

ಲಕ್ನೋ: ಮಹಿಳೆಯೊಬ್ಬಳು ಆಸ್ತಿಗೋಸ್ಕರ ಸುಪಾರಿ ನೀಡಿ ಪತಿಯನ್ನೇ ಕೊಲೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಬಾಗಪತ್‍ನಲ್ಲಿ ನಡೆದಿದೆ.

ವಿಕಾಸ್ ಸಿಂಗ್ ಕೊಲೆಯಾದ ವ್ಯಕ್ತಿ. ಆರೋಪಿ ಪತ್ನಿ ರಜನಿ ಆರು ಲಕ್ಷ ರೂಪಾಯಿ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಳೆ. ಆರೋಪಿ ಮಹಿಳೆಯನ್ನು ಗುರುವಾರ ಬಂಧಿಸಲಾಗಿದೆ. ಮೃತನಿಗೆ ನಾಲ್ವರು ಹೆಂಡತಿಯರಿದ್ದು, ಅವರೊಂದಿಗೆ ಆಸ್ತಿಯನ್ನು ಹಂಚಿಕೊಳ್ಳುವುದಕ್ಕೆ ಇಷ್ಟಪಡಲಿಲ್ಲ. ಹೀಗಾಗಿ ಆತನನ್ನು ಕೊಲೆ ಮಾಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವಿಕಾಸ್ ಸಿಂಗ್ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದನು. ವಿಕಾಸ್ ಸಿಂಗ್ ಕೆಲವು ದಿನಗಳ ಹಿಂದೆ ಬಾಗಪತ್‍ನಲ್ಲಿರುವ ತಮ್ಮ ಗ್ರಾಮಕ್ಕೆ ಬಂದಿದ್ದನು. ಜೂನ್ 19 ರಂದು ಗ್ರಾಮದಲ್ಲಿ ಆತನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಕೊಲೆಯಾದ ಆರು ದಿನದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಮಹಿಳೆ ದೆಹಲಿಯ ನಂಗ್ಲೋಯಿ ಪ್ರದೇಶದವಳು ಎಂದು ಇನ್ಸ್ ಪೆಕ್ಟರ್ ಪ್ರವೀಣ್ ಕುಮಾರ್ ಹೇಳಿದ್ದಾರೆ.

ಮೃತ ವಿಕಾಸ್ ಸಿಂಗ್ ಮತ್ತು ಆರೋಪಿ ರಜನಿ 2009ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ ಮೃತ ವಿಕಾಶ್ ಸಿಂಗ್ 2017 ಮತ್ತು 2020ರ ನಡುವೆ ಮತ್ತೆ ಮೂವರು ಮಹಿಳೆಯರನ್ನು ಮದುವೆಯಾಗಿದ್ದನು. ಇದರಿಂದ ಆರೋಪಿ ರಜನಿಗೆ ತನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಶುರುವಾಗಿತ್ತು. ವಿಕಾಸ್ ತನಗೆ ವಿಚ್ಛೇದನ ನೀಡುತ್ತಾನೆ ಮತ್ತು ತನ್ನ ಆಸ್ತಿಯನ್ನು ಮೂವರು ಪತ್ನಿಯರೊಂದಿಗೆ ಹಂಚಿಕೊಳ್ಳುತ್ತಾನೆ ಎಂದು ಆರೋಪಿ ಭಯಪಟ್ಟಿದ್ದಳು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಕೊನೆಗೆ ರಜನಿ ಆಸ್ತಿಗೋಸ್ಕರ ಪತಿಯನ್ನ ಕೊಲೆ ಮಾಡಿಸಲು ಪ್ಲಾನ್ ಮಾಡಿಕೊಂಡಿದ್ದಳು. ಅದರಂತೆಯೇ ಕೊಲೆ ಮಾಡಲು ಕಿಲ್ಲರ್ ಸುಧೀರ್ ಸಿಂಗ್‍ಗೆ ಆರು ಲಕ್ಷ ರೂ. ನೀಡಿದ್ದಳು. ಸುದೀಪ್ ಸಿಂಗ್ ಕೊಲೆ ಮಾಡಲು ಮೂವರು ಸ್ಥಳೀಯ ಶೂಟರ್‌ಗಳನ್ನು ನೇಮಿಸಿದ್ದನು. ನಂತರ ಮೂವರು ವಿಕಾಸ್ ಸಿಂಗ್ ಮನೆಗೆ ಹೋಗಿ ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.

ಸದ್ಯಕ್ಕೆ ಆರೋಪಿಗಳಾದ ರಜನಿ, ಸುದೀರ್ ಸಿಂಗ್ ಮತ್ತು ರೋಹಿತ್ ಸಿಂಗ್‍ನನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳಾದ ಸಚಿನ್ ಸಿಂಗ್ ಮತ್ತು ರವಿ ಸಿಂಗ್ ಪರಾರಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *