ಮೂಲಭೂತ ಸೌಲಭ್ಯಗಳಿಲ್ಲ, ಕಾಡಂಚಿನ ಗ್ರಾಮಗಳ ಜನರ ಪರದಾಟ- ಶಾಲೆಗೆ ಹೋಗಲಾಗದೆ ಬಾಲಕನ ಕಣ್ಣೀರು

ಕೋಲಾರ: ವಾಹನ ಸೌಲಭ್ಯವಿಲ್ಲದೆ ಆನೆಗಳು ಸೇರಿದಂತೆ ಕಾಡು ಪ್ರಾಣಿಗಳ ದಾಳಿಯ ಭಯದಲ್ಲೇ ಕಾಡಿನಲ್ಲಿ ಈ ಬಾಲಕ ಶಾಲೆಯ ಬಗ್ಗೆ ಚಿಂತಿಸುತ್ತಿರುವ ಚಿತ್ರಣ ಎಂತಹವರಿಗೂ ನಡುಕ ಹುಟ್ಟಿಸುತ್ತದೆ.

ಜಿಲ್ಲೆಯ ಬಂಗಾರಪೇಟೆ ತಾಲೂಕು ಮಲ್ಲೇಶನಪಾಳ್ಯ ಹಾಗೂ ತಳೂರು ಗ್ರಾಮದಳಲ್ಲಿ ಜನ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಈ ಬಾಲಕ ಆನೆಗಳ ಭಯದ ಮಧ್ಯೆ ವಾಹನ ಸೌಲಭ್ಯಗಳಿಲ್ಲದ ಕಾಡಿನಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ನಡೆದು ಶಾಲೆ ನೆನೆದು ಕಣ್ಣೀರು ಇಡುತ್ತಿದ್ದಾನೆ. ಈ ಬಾಲಕನಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಅತ್ತ ಕಾಡಂಚಿನಲ್ಲಿ ಕಾಡಾನೆಗಳ ಕಾಟ ಇರುವುದರಿಂದ ಭಯಗೊಂಡಿರುವ ಈ ಬಾಲಕ ದಿಕ್ಕು ಕಾಣದೆ ಕಣ್ಣೀರಾಕುತ್ತಿದ್ದಾನೆ.

ಈ ಗಡಿ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ, ಯಾವುದೇ ಸಾರಿಗೆ ಸಂಪರ್ಕವಿಲ್ಲ, ಮಕ್ಕಳು ಶಾಲೆಗೆ ಹೋಗಬೇಕೆಂದರೆ 2 ಕಿಲೋಮೀಟರ್ ನಡೆದುಕೊಂಡು ಹೋಗಬೇಕು. ಏನಾದರೂ ಬೇಕೆಂದರೂ ಗ್ರಾಮಸ್ಥರು ನಡೆದೇ ಹೋಗಬೇಕು. ಇಂತಹ ಸ್ಥಿತಿಯಲ್ಲಿರುವ ಈ ಗ್ರಾಮಕ್ಕೆ ಈಗ ಕಾಡಾನೆಗಳ ಹಾವಳಿ ಬೇರೆ ಹೆಚ್ಚಾಗಿದ್ದು, ಗಡಿ ಗ್ರಾಮಗಳ ಜನರು ಜೀವ ಭಯದಲ್ಲಿ ಹಗಲು ರಾತ್ರಿ ಬದುಕುವ ಸ್ಥಿತಿ ಎದುರಾಗಿದೆ. ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಯಾರನ್ನು ಕೇಳಿದರೂ ನಮ್ಮ ಕೂಗು ಅವರಿಗೆ ಕೇಳಿಸಿಲ್ಲ ಅನ್ನೋದು ಈ ಬಾಲಕನ ಕಣ್ಣೀರು.

ಬಂಗಾರಪೇಟೆ ತಾಲೂಕು ಮಲ್ಲೇಶನಪಾಳ್ಯ, ತಳೂರು, ಭತ್ಲಹಳ್ಳಿ, ಕದಿರಿನತ್ತ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಈಗಲೂ ಸರಿಯಾದ ರಸ್ತೆ ಇಲ್ಲ. ಸಾರಿಗೆ ವ್ಯವಸ್ಥೆ ಇಲ್ಲ. ಇದರಿಂದ ಗ್ರಾಮದ ಜನರು ಕಾಡಿನಲ್ಲಿ ಒಂದು ರೀತಿಯ ಕಾಡು ಪ್ರಾಣಿಗಳಂತೆ ಬದುಕುತ್ತಿದ್ದಾರೆ. ಆರೋಗ್ಯ ಸಮಸ್ಯೆಯಾದರೆ ಇಪ್ಪತ್ತು ಕಿ.ಮೀ ಹೋಗಬೇಕು, ಮನೆಗೆ ದಿನಸಿ ಬೇಕಂದ್ರೆ ನಾಲ್ಕೈದು ಕಿ.ಮೀ ಹೋಗಬೇಕು.

ಮಕ್ಕಳು ಶಾಲೆಗೆ ಹೋಗಬೇಕೆಂದರೆ ಎರಡು ಕಿ.ಮೀ ನಡೆದು ಹೋಗಬೇಕು ಇಂತಹ ಪರಿಸ್ಥಿತಿಯಲ್ಲಿರುವ ಗ್ರಾಮದ ಜನರು ಹತ್ತಾರು ವರ್ಷಗಳಿಂದ ಕಂಡ ಕಂಡವರ ಮುಂದೆ ಕೈಮುಗಿದು ನಿಂತರೂ ಇವರ ಸಮಸ್ಯೆಗಳು ಬಗೆಹರಿದಿಲ್ಲ. ಅಷ್ಟೇ ಅಲ್ಲದೆ ಇವರು ಹತ್ತಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನುಗಳಿಗೂ ಅರಣ್ಯ ಇಲಾಖೆಯವರು ಇದು ಅರಣ್ಯ ಭೂಮಿ ಎಂದು ಕ್ಯಾತೆ ತೆಗೆಯುತ್ತಿದ್ದಾರೆ. ಹೀಗಾಗಿ ಸೌಲಭ್ಯಗಳ ವಂಚಿತ ಈ ಜನರು ತಮ್ಮ ಬದುಕನ್ನು ನೆನೆದು ನಿತ್ಯವೂ ಕಣ್ಣೀರು ಹಾಕುವ ಸ್ಥಿತಿ ಬಂದಿದೆ.

ಓದುವ ಆಸೆಯಿದ್ದರೂ, ಬದುಕುವ ಛಲವಿದ್ದರೂ, ಸೌಲಭ್ಯಗಳಿಲ್ಲದ ಈ ಜಾಗದಲ್ಲಿ ತಮ್ಮ ನೂರಾರು ಆಸೆ ಆಕಾಂಕ್ಷೆಗಳನ್ನು ಸಮಾಧಿ ಮಾಡಿ ಜೀವನ ನಡೆಸುತ್ತಿರುವ ಈ ಜನರಿಗೆ ಯಾವುದೇ ಸರ್ಕಾರಗಳು, ಯಾರೇ ಅಧಿಕಾರಿಗಳು ಬಂದರೂ ಸೌಲಭ್ಯ ನೀಡಲಾಗುತ್ತಿಲ್ಲ.

Comments

Leave a Reply

Your email address will not be published. Required fields are marked *