ಮೂರನೇ ಮದ್ವೆಯಾದ ಇಂಗ್ಲೆಂಡ್ ಪ್ರಧಾನಿ – ದಂಪತಿಗೆ ಇದ್ದಾನೆ 1 ವರ್ಷದ ಮಗ

ಲಂಡನ್: ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಮೂರನೇ ಬಾರಿ ಮದುವೆಯಾಗಿದ್ದಾರೆ. ಪ್ರೇಯಸಿ ಕ್ಯಾರಿ ಸೈಮಂಡ್ಸ್ ಅವರನ್ನು ಶನಿವಾರ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ.

ಕುಟುಂಬದವರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ರೋಮನ್ ಕ್ಯಾಥೋಲಿಕ್ ವೆಸ್ಟ್ ಮಿನಿಸ್ಟರ್ ಕ್ಯಾಥೆಡ್ರಲ್‍ನಲ್ಲಿ ಮದುವೆ ನಡೆದಿದೆ. ಇಂಗ್ಲೆಂಡಿನಲ್ಲಿ ಸದ್ಯ ಕೋವಿಡ್ ನಿರ್ಬಂಧಗಳು  ಜಾರಿಯಲ್ಲಿರುವ ಕಾರಣ 30 ಜನರಿಗೆ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶವಿತ್ತು.

 

 

ಕೇಂದ್ರ ಲಂಡನ್‍ನಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಕೊನೆಯ ಕ್ಷಣಗಳಲ್ಲಿ ಅತಿಥಿಗಳಿಗೆ ಆಹ್ವಾನ ನೀಡಲಾಗಿತ್ತು. ಪ್ರಧಾನಿ ಕಚೇರಿಯ ಹಿರಿಯ ಅಧಿಕಾರಿಗಳಿಗೂ ಈ ಮದುವೆ ಬಗ್ಗೆ ಮಾಹಿತಿ ಇರಲಿಲ್ಲ ಎಂದು ವರದಿಯಾಗಿದೆ.

56 ವರ್ಷದ ಜಾನ್ಸನ್ ಮತ್ತು 33 ವರ್ಷ ಸೈಮಂಡ್ಸ್ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರಿಗೆ 1 ವರ್ಷದ ಮಗ ಇದ್ದಾನೆ. ಇದನ್ನೂ ಓದಿ:ಮದುವೆ ಆಗಿಲ್ಲ ಅಂತ ವಿಷ ಸೇವಿಸಿ ಯುವಕ ಆತ್ಮಹತ್ಯೆ

 

2019ರಲ್ಲಿ ಜಾನ್ಸನ್ ಪ್ರಧಾನಿಯಾದ ಸಂದರ್ಭದಿಂದಲೂ ಇಬ್ಬರೂ ಲಿವ್ ಇನ್ ಟುಗೆದರ್ ನಲ್ಲಿ ವಾಸಿಸುತ್ತಿದ್ದಾರೆ. ಕಳೆದ ವರ್ಷ ಇಬ್ಬರೂ ತಾವು ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿ ಹಾಗೂ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ಘೋಷಿಸಿದ್ದರು. 2020ರ ಏಪ್ರಿಲ್‍ನಲ್ಲಿ ಮಗ ಜನಿಸಿದ್ದ.

ಬೋರಿಸ್ ಜಾನ್ಸನ್ ಅವರ ಖಾಸಗಿ ಜೀವನದ ಬಗ್ಗೆ ವಿರೋಧ ಪಕ್ಷ ಮತ್ತು ಮಾಧ್ಯಮಗಳು ಟೀಕೆ ಮಾಡಿದ್ದವು. ತಮ್ಮ ವಿವಾಹೇತರ ಸಂಬಂಧದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಆಗ ವಿರೋಧಪಕ್ಷ ಕನ್ಸರ್ವೇಟಿವ್ ಪಾರ್ಟಿಯ ನೀತಿ ತಂಡದಿಂದ ಅವರನ್ನು ತೆಗೆದುಹಾಕಲಾಗಿತ್ತು. ಎರಡು ಬಾರಿ ವಿಚ್ಚೇದನ ಪಡೆದಿರುವ ಜಾನ್ಸನ್, ತಮಗೆ ಎಷ್ಟು ಮಕ್ಕಳಿದ್ದಾರೆ ಎಂಬ ಮಾಹಿತಿ ನೀಡಲು ನಿರಾಕರಿಸಿದ್ದರು.

ಈ ಮೊದಲು ಅಲ್ಲೆಗ್ರಾ ಮೊಸ್ಟಿನ್ ಅವರ ಜೊತೆ ವಿವಾಹನ ನಡೆದಿತ್ತು. 1993ರಲ್ಲಿ ಬೋರಿಸ್ ಇವರಿಗೆ ವಿಚ್ಚೇದನ ನೀಡಿದ್ದರು. ನಂತರ ವಕೀಲೆ ಮರೀನಾ ವ್ಹೀಲರ್ ಅವರೊಂದಿಗೆ ನಡೆದಿತ್ತು. 2018ರ ಸೆಪ್ಟೆಂಬರ್ ನಲ್ಲಿ  ಇಬ್ಬರೂ ಬೇರೆಯಾಗಿದ್ದಾಗಿ ಪ್ರಕಟಿಸಿದ್ದರೂ 2020ರಲ್ಲಿ ವಿಚ್ಚೇದನ ಪ್ರಕ್ರಿಯೆ ಪೂರ್ಣಗೊಂಡಿತ್ತು. ಇವರಿಬ್ಬರಿಗೂ 4 ಮಂದಿ ಮಕ್ಕಳಿದ್ದಾರೆ.

Comments

Leave a Reply

Your email address will not be published. Required fields are marked *