ಮೂರನೇ ಅಲೆಯಲ್ಲಿ ಮಕ್ಕಳ ಸಾವು ಹೆಚ್ಚಾದ್ರೆ ಜನ ಸುಮ್ನೆ ಇರಲ್ಲ: ಎ. ನಾರಾಯಣಸ್ವಾಮಿ

ಚಿತ್ರದುರ್ಗ: ಕೋವಿಡ್-19 ಮೂರನೇ ಅಲೆಯು ಹೆಚ್ಚಾಗಿ ಮಕ್ಕಳಲ್ಲಿ ಸೋಂಕು ಕಂಡುಬರುವ ಸಾಧ್ಯತೆ ಇರುವುದರಿಂದ ಒಂದು ತಿಂಗಳೊಳಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳೊಂದಿಗೆ ಕೋವಿಡ್-19 ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಒಂದು ವೇಳೆ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚಾಗಿ ಸಾವನ್ನಪ್ಪಿದರೆ ಜನರು ಸಮ್ಮನೆ ಇರಲ್ಲ ಅಂತ ಸಂಸದ ಎ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್-19ರ ಸಂಭಾವ್ಯ ಮೂರನೇ ಅಲೆಯ ನಿಯಂತ್ರಣ ಸಂಬಂಧ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್-19ರ ಎರಡನೇ ಅಲೆಯ ಸಂದರ್ಭದಲ್ಲಿ ಎದುರಿಸಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಕೋವಿಡ್-19ರ ಸಂಭಾವ್ಯ ಮೂರನೇ ಅಲೆಯ ನಿಯಂತ್ರಣಕ್ಕೆ ಸಿದ್ಧರಾಗಬೇಕು ಎಂದು ತಾಕೀತು ಮಾಡಿದರು.

ಪ್ರಸ್ತಾವನೆ ಸಲ್ಲಿಸಿ: ಕೋವಿಡ್-19ರ ಮೂರನೇ ಅಲೆಯ ನಿಯಂತ್ರಣಕ್ಕಾಗಿ ಜಿಲ್ಲೆಗೆ ಅಗತ್ಯವಾಗಿ ಬೇಕಾಗಿರುವ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ತಜ್ಞ ವೈದ್ಯರು, ಸಿಬ್ಬಂದಿ, ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್ ಹಾಗೂ ಔಷಧಿಗಳ ವಿವರಗಳನ್ನೊಳಗೊಂಡಂತೆ ಇದಕ್ಕೆ ಬೇಕಾಗುವ ಬಜೆಟ್‍ನ ಸಂಪೂರ್ಣ ವಿವರದ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಸಂಸದರು ಸೂಚನೆ ನೀಡಿದರು. ಇದನ್ನೂ ಓದಿ: ಕೊಂಚ ಏರಿಕೆ ಕಂಡ ಕೊರೊನಾ ಪ್ರಕರಣ- ರಾಜ್ಯದಲ್ಲಿಂದು 3,222 ಮಂದಿಗೆ ಪಾಸಿಟಿವ್

ಜಿಲ್ಲೆಗೆ ಅಗತ್ಯವಿರುವ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಶೀಘ್ರದಲ್ಲಿ ಅರ್ಜಿ ಆಹ್ವಾನಿಸಬೇಕು. ಶೇ.10ರಷ್ಟು ಅಗತ್ಯವಿರುವ ಔಷಧಿಯನ್ನು ಖರೀದಿಸಬೇಕು. ಕೋವಿಡ್-19ರ ಮೂರನೇ ಅಲೆಯಲ್ಲಿ ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಗತ್ಯ ಕ್ರಮವಹಿಸಬೇಕು. ಹಾಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದರು.

ಸೆಮಿನಾರ್, ತರಬೇತಿಗೆ ಸೂಚನೆ: ಕೋವಿಡ್-19 ಮೂರನೇ ಅಲೆಯ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಕೋವಿಡ್ ಸೋಂಕಿತ ಮಕ್ಕಳಿಗೆ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಎನ್ನುವುದರ ಕುರಿತು ತಜ್ಞರಿಂದ ಸೆಮಿನಾರ್ ಹಾಗೂ ತರಬೇತಿ ನೀಡುವಂತೆ ಸಂಸದರು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್, ಕೋವಿಡ್-19 ಚಿಕಿತ್ಸೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಲು ಇಂದಿರಾ ಗಾಂಧಿ ಮಕ್ಕಳ ತರಬೇತಿ ಸಂಸ್ಥೆಯೊಂದಿಗೆ ಚರ್ಚಿಸಲಾಗಿದ್ದು, ಸಿಬ್ಬಂದಿಗೆ ತರಬೇತಿ ನೀಡಲು ಅಗತ್ಯ ಕ್ರಮವಹಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು. ತಾಲ್ಲೂಕುವಾರು ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೆಮಿನಾರ್ ಹಾಗೂ ತರಬೇತಿ ನೀಡಬೇಕು. ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಆಪರೇಟಿಂಗ್ ಹಾಗೂ ಆಕ್ಸಿಜನ್ ಬಳಕೆ ಕುರಿತು ತರಬೇತಿ ನೀಡಬೇಕು ಎಂದು ಸಂಸದರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಹೆಚ್.ಜೆ.ಬಸವರಾಜಪ್ಪ, ಆರ್ಸಿಹೆಚ್ ಅಧಿಕಾರಿ ಡಾ.ಕುಮಾರಸ್ವಾಮಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *