ಮುನಿಸು ಶಮನವಾದರೂ ಜಮೀರ್ ಆಹ್ವಾನ ಒಪ್ಪದ ಸಿದ್ದರಾಮಯ್ಯ

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ನಾನು ಯಾವುದೇ ಕಾರಣಕ್ಕೂ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಶಾಸಕ ಜಮೀರ್ ಅಹ್ಮದ್ ಸಿದ್ದರಾಮಯ್ಯ ಚಾಮರಾಜಪೇಟೆಯಿಂದ ಸ್ಪರ್ಧೆ ಮಾಡಬೇಕು ಎಂದು ಹೇಳುತ್ತಿದ್ದರು. ಅಷ್ಟೇ ಅಲ್ಲದೇ ಸಿದ್ದರಾಮಯ್ಯ ಪದೇ ಪದೇ ಚಾಮರಾಜಪೇಟೆಗೆ ಬೇರೆ ಬೇರೆ ಕಾರ್ಯಕ್ರಮಗಳಿಗೆ ಹೋಗುತ್ತಿದ್ದ ಕಾರಣ ಈ ಕ್ಷೇತ್ರದಿಂದಲೇ ಸ್ಪರ್ಧಿಸಬಹುದು ಎಂಬ ಮಾತು ರಾಜಕೀಯ ವಲಯದಿಂದ ಕೇಳಿ ಬಂದಿತ್ತು.

ಇತ್ತ ಇಡಿ ದಾಳಿ ನಂತರ ಸಿದ್ದರಾಮಯ್ಯ ಹಾಗೂ ಜಮೀರ್ ಅಹ್ಮದ್ ನಡುವೆ ಮುನಿಸು ಉಂಟಾಗಿತ್ತು. ಇದನ್ನು ಸರಿ ಮಾಡಲು ಸಿದ್ದರಾಮಯ್ಯ ಆಪ್ತ ಬಣ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ತಮ್ಮ ಆಪ್ತರ ಮುಂದೆ ಎಲ್ಲ ಅಂತೆ ಕಂತೆ ಮಾತುಗಳಿಗೆ ಫುಲ್ ಸ್ಟಾಪ್ ಇಟ್ಟ ಸಿದ್ದರಾಮಯ್ಯ ತಮ್ಮ ಮುಂದಿನ ಚುನಾವಣೆ ಸ್ಪರ್ಧೆ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ – ಜಮೀರ್ ಅಹ್ಮದ್ ಖಾನ್ ಭೇಟಿಯ ಇನ್‍ಸೈಡ್ ಸ್ಟೋರಿ 

ಚಾಮರಾಜಪೇಟೆಯಿಂದ ಸ್ಪರ್ಧೆ ಮಾಡುವ ಬಗ್ಗೆ ನಾನು ಯಾವತ್ತು ಯೋಚನೆ ಮಾಡಿಲ್ಲ. ಜಮೀರ್ ಏನೇ ಹೇಳಿರಬಹುದು. ಆದರೆ ನಾನು ಬಾದಾಮಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟವಾಗಿ ಆಪ್ತರ ಮುಂದೆ ಹೇಳಿದ್ದಾರೆ.

ಬಾದಾಮಿ ಬಿಟ್ಟು ಸ್ಪರ್ಧೆ ಮಾಡಿದರೆ ವರುಣಾ ಅಥವಾ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಚಾಮರಾಜಪೇಟೆಯಿಂದ ಕಣಕ್ಕೆ ಇಳಿಯವುದಿಲ್ಲ. ಜಮೀರ್ ವಿಶ್ವಾಸ ಏನೇ ಇರಬಹುದು. ಎಷ್ಟೇ ಪ್ರೀತಿ ತೋರಿಸಬಹುದು. ನನ್ನ ಸ್ಪರ್ಧೆ ಮಾತ್ರ ಬಾದಾಮಿಯಿಂದ ಆಪ್ತರ ಮುಂದೆ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಈ ಖಡಕ್ ಮಾತುಗಳನ್ನು ಹೇಳುವ ಮೂಲಕ ಎಷ್ಟೇ ಸ್ನೇಹ ಕುದುರಿದರೂ ಚಾಮರಾಜಪೇಟೆ ಕ್ಷೇತ್ರಕ್ಕೆ ಮಾತ್ರ ಬರುವುದಿಲ್ಲ ಎಂದು ಹೇಳುವ ಮೂಲಕ ಜಮೀರ್ ಪ್ರೀತಿಯ ಆಹ್ವಾನಕ್ಕೆ ಸಿದ್ದರಾಮಯ್ಯ ಫುಲ್ ಸ್ಟಾಪ್ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *