ಮುಕೇಶ್ ಅಂಬಾನಿ ಮನೆ ಬಳಿ ಕಾರಿನಲ್ಲಿ ಸ್ಫೋಟಕ ಪತ್ತೆ

ಮುಂಬೈ: ಸ್ಫೋಟಕ ಒಳಗೊಂಡ ಎಸ್‍ಯುವಿ ಕಾರ್ ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಕಾಣಿಸಿಕೊಂಡಿದ್ದು, ಆತಂಕ ಹೆಚ್ಚಿಸಿದೆ.

ಪೆಡ್ಡಾರ್ ರಸ್ತೆಯಲ್ಲಿರುವ ಸುಪ್ರಸಿದ್ಧ ಆಂಟಿಲಿಯಾ ಮನೆಯ ಹೊರಗಡೆ ಸ್ಕಾರ್ಪಿಯೋ ಎಸ್‍ಯುವಿ ಕಾರ್ ಕಾಣಿಸಿಕೊಂಡಿದ್ದು, ಅದರ ಒಳಗಡೆ ಬ್ಯಾಗ್‍ನಲ್ಲಿ 20 ಜೆಲೆಟಿನ್ ಕಡ್ಡಿ ಪತ್ತೆಯಾಗಿವೆ. ವಾಹನ ನಿಂತಿದ್ದನ್ನು ಗುರುವಾರ ಸಂಜೆ ಅಂಬಾನಿ ಭದ್ರತಾ ಸಿಬ್ಬಂದಿ ಗುರುತಿಸಿದ್ದು, ಬಳಿಕ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಮಾಹಿತಿ ದೊರೆಯುತ್ತಿದ್ದಂತೆ ಗ್ಯಾಮದೇವಿ ಠಾಣೆಯ ಹಲವು ಪೊಲೀಸರು ಸ್ಥಳಕ್ಕೆ ಧಾವಿಸಿ ಎಸ್‍ಯುವಿ ಪರೀಕ್ಷಿಸಿದ್ದಾರೆ. ಬಳಿಕ ಬಾಂಬ್ ಸ್ಕ್ವಾಡ್‍ನ್ನು ಸಹ ಸ್ಥಳಕ್ಕೆ ಕರೆಸಲಾಗಿದ್ದು, ವಾಹನವನ್ನು ಪರೀಕ್ಷೆ ನಡೆಸಿದ ಬಳಿಕ 20 ಜೆಲೆಟಿನ್ ಕಡ್ಡಿ ಇರುವುದು ಪತ್ತೆಯಾಗಿದೆ. 20 ಜೆಲೆಟಿನ್ ಕಡ್ಡಿ ಪತ್ತೆಯಾಗುತ್ತಿದ್ದಂತೆ ಡಾಗ್ ಸ್ಕ್ವಾಡ್ ಸಹ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿತು.

ವಾಹನದಲ್ಲಿ 20 ಜೆಲೆಟಿನ್ ಕಡ್ಡಿ ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಖಚಿತಪಡಿಸಿದ್ದಾರೆ. ಕೇವಲ ಜೆಲೆಟಿನ್ ಸ್ಟಿಕ್ಸ್ ಮಾತ್ರ ಪತ್ತೆಯಾಗಿದ್ದು, ಸ್ಫೋಟಕದ ಸೆಂಬಲ್ ಪತ್ತೆಯಾಗಿಲ್ಲ ಎಂದು ಮುಂಬೈ ಪೊಲೀಸ್ ಪಿಆರ್‍ಒ ಖಚಿತಪಡಿಸಿದ್ದಾರೆ.

ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‍ಮುಖ್ ಸಹ ಈ ಬಗ್ಗೆ ಪ್ರತಿಕ್ರಿಯಿಸಿ, ಮುಖೇಶ್ ಅಂಬಾನಿ ಅವರ ಮನೆ ಬಳಿ ಕಾರ್ ನಲ್ಲಿ ಜೆಲೆಟಿನ್ ಪತ್ತೆಯಾಗಿರುವ ಬಗ್ಗೆ ಮುಂಬೈ ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಸ್ಫೋಟಕ ವಸ್ತು ಪತ್ತೆಯಾಗುತ್ತಿದ್ದಂತೆ ಕಮಾಂಡೋಗಳು ಸೇರಿ ಭಾರೀ ಪ್ರಮಾಣದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಭಯೋತ್ಪಾದನೆ ನಿಗ್ರಹ ದಳ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನಿಗೂಢ ವಾಹನದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಪರಿಶೀಲಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *