ಮುಂಬೈನಲ್ಲಿ 200 ರೂ. ದಂಡದ ಜೊತೆಗೆ ಉಚಿತ ಮಾಸ್ಕ್

– ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಮ

ಮುಂಬೈ: ಕೊರೊನಾ ಹಿನ್ನೆಲೆ ಮಾಸ್ಕ್ ಹಾಕುವುದನ್ನು ಉತ್ತೇಜಿಸುವ ಸಲುವಾಗಿ ಬೃಹತ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಉತ್ತಮ ಕ್ರಮ ಕೈಗೊಂಡಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಾಮಾನ್ಯವಾಗಿ ಮಾಸ್ಕ್ ಹಾಕದ ಸಾರ್ವಜನಿಕರಿಗೆ ಸರ್ಕಾರ ಹಾಗೂ ನಗರ ಪಾಲಿಕೆಗಳು ದಂಡವನ್ನು ಮಾತ್ರ ವಿಧಿಸುತ್ತವೆ. ಆದರೆ ಬೃಹತ್ ಮುಂಬೈ ಮಹಾನಗರ ಪಾಲಿಕೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಮಾಸ್ಕ್ ಹಾಕದವರಿಗೆ 200 ರೂ. ದಂಡದ ಜೊತೆಗೆ ಉಚಿತ ಮಾಸ್ಕ್ ನೀಡುವ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಸಾರ್ವಜನಿಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಬಿಎಂಸಿ, ಏಪ್ರಿಲ್‍ನಿಂದ ನವೆಂಬರ್ 28ರ ವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದ 4.85 ಲಕ್ಷ ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸುಮಾರು 10.7 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ. ಆದರೆ ದಂಡ ಪಾವತಿಸಿದ ಬಳಿಕ ಮಾಸ್ಕ್ ಹಾಕದ ವ್ಯಕ್ತಿ ಆ ದಿನ ಹಾಗೇ ಸಂಚರಿಸುತ್ತಾನೆ. ಇದರಿಂದ ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಅಲ್ಲದೆ ಇದರಿಂದ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ.

ಈ ಎಲ್ಲ ಅಂಶಗಳನ್ನು ಪರಿಗಣಿಸಿ ಕೊರೊನಾ ನಿಯಮವನ್ನು ಪಾಲಿಸುವ ಉದ್ದೇಶದಿಂದ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮಾಸ್ಕ್ ಹಾಕದವರಿಗೆ 200 ರೂ. ದಂಡ ವಿಧಿಸಿ, ಬಳಿಕ ಉಚಿತ ಮಾಸ್ಕ್ ನೀಡಲಾಗುತ್ತದೆ. ದಂಡ ಪಾವತಿಸಿದ ರಶೀದಿಯಲ್ಲಿ ಉಚಿತ ಮಾಸ್ಕ್ ನೀಡಲಾಗಿದೆ ಎಂದು ಉಲ್ಲೇಖಿಸಲಾಗುತ್ತದೆ ಎಂದು ಪ್ರಕಣೆಯಲ್ಲಿ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕಣಗಳು ದಾಖಲಾಗಿದ್ದು, ಮುಂಬೈ ಒಂದರಲ್ಲೇ 2,82,821 ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ 10,865 ಜನ ಸಾವನ್ನಪ್ಪಿದ್ದಾರೆ.

Comments

Leave a Reply

Your email address will not be published. Required fields are marked *