ಮುಂದೊಂದಿನ ಭಾರತಕ್ಕೂ ಮೋದಿ ಹೆಸರಿಡಬಹುದು: ಮಮತಾ ಬ್ಯಾನರ್ಜಿ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಗುಜರಾತ್‍ನ ಮೊಟೇರಾ ಕ್ರೀಡಾಂಗಣದ ಮರುನಾಮಕರಣವನ್ನು ಟೀಕಿಸಿದ್ದು, ಒಂದಲ್ಲಾ ಒಂದು ದಿನ ಭಾರತಕ್ಕೂ ಕೂಡ ಮೋದಿ ಎಂದು ಹೆಸರಿಡಬಹುದು ಎಂದು ವ್ಯಂಗ್ಯ ಮಾಡಿದ್ದಾರೆ.

ಕೊಲ್ಕತ್ತಾದಲ್ಲಿ ಕಾಂಗ್ರೆಸ್ ನಡೆಸಿದ ರ‍್ಯಾಲಿ ವೇಳೆ ಮಾತನಾಡಿದ ಮಮತಾ ಬ್ಯಾನರ್ಜಿ, ಕೊರೊನಾ ವ್ಯಾಕ್ಸಿನ್ ಮೇಲೆ ಮೋದಿಯವರ ಫೋಟೋ ಇರಿಸಲಾಗಿದೆ. ಅದು ಮೋದಿ ವ್ಯಾಕ್ಸಿನ್ ಎಂದು ಎದ್ದು ಕಾಣಿಸುವ ರೀತಿಯಲ್ಲಿದೆ. ಇದು ಕೊರೊನಾ ಲಸಿಕೆಯೋ ಅಥವಾ ಮೋದಿ ಲಸಿಕೆಯೋ ಎಂದು ಪ್ರಶ್ನಿಸುತ್ತಾ, ಕೊರೊನಾ ಲಸಿಕೆಯನ್ನು ಎಲ್ಲೋ ಮೋದಿ ಲಸಿಕೆಗಳನ್ನಾಗಿ ಮಾರ್ಪಡಿಸಿರಬಹುದು ಎಂದು ವ್ಯಂಗ್ಯವಾಡಿದರು.

ಸ್ಟೇಡಿಯಂಗಳು, ಶಾಲೆಗಳು ಮತ್ತು ಕಾಲೇಜುಗಳು, ಲಸಿಕೆಗಳು, ಬಂಗಾಳ, ಹೀಗೆ ಒಂದು ದಿನ ಭಾರತದ ಹೆಸರನ್ನು ಕೂಡ ಮೋದಿ ಎಂದು ಬದಲಾಯಿಸಬಹುದು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕಾಲೆಳೆದರು.

ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬ ಭಾರತೀಯ ಜನತಾ ಪಕ್ಷದವರ ಮಾತಿಗೆ, ಬಿಜೆಪಿಯವರು ಚುನಾವಣೆ ಸಮಯದಲ್ಲಿ ಮಾತ್ರ ಬಂಗಾಳಕ್ಕೆ ಬಂದು ಸುಳ್ಳುಗಳನ್ನು ಹೇಳಿ ಹೋಗುತ್ತಾರೆ. ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡುವ ಅವರು ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಮಹಿಳೆಯರಿಗೆ ಭದ್ರತೆ ಒದಗಿಸಿದ್ದಾರೆಯೇ? ಮೋದಿಯವರ ಪ್ರಿಯವಾದ ಗುಜರಾತ್ ರಾಜ್ಯದಲ್ಲಿನ ಪರಿಸ್ಥಿತಿ ಹೇಗಿದೆ? ಪಶ್ಚಿಮ ಬಂಗಾಳದಲ್ಲಿ ಮಹಿಳೆಯರು ರಾತ್ರಿ ಕೂಡ ಓಡಾಡುವಷ್ಟು ಸುರಕ್ಷತೆ ಇದೆ ಎಂದು ಹೇಳುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಬಂಗಾಳದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಇಲ್ಲಸಲ್ಲದ ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ. ತೃಣಮೂಲದ ಧ್ಯೇಯವಾಕ್ಯವನ್ನು ನೆನಪಿನಲ್ಲಿಟ್ಟುಕೊಳ್ಳಿ ಮಾ-ಮಾತಿ-ಮನುಷ್ಯ (ತಾಯಿ, ತಾಯಿನಾಡು ಮತ್ತು ಮಾನವೀಯತೆ) ಎಂದು ಹೇಳುವ ಮೂಲಕ ಕಿಡಿಕಾರಿದರು.

ಮಹಿಳೆಯರು ಬಂಗಾಳದ ಪರ ಹೋರಾಡಲಿದ್ದಾರೆ. ಮಹಿಳೆಯರು ಬಂಗಾಳವನ್ನು ನಿರ್ಮಿಸಲಿದ್ದಾರೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಇದು ನಾನು ಮಾಡುತ್ತಿರುವ ಪ್ರತಿಜ್ಞೆ ಎಂದು ಹೇಳಿದರು.

ಅಹಮದಾಬಾದ್‍ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೀಲ್ ಎಂಬ ಹೆಸರಿನಲ್ಲಿದ್ದ ಸ್ಟೇಡಿಯಂನನ್ನು ಫೆಬ್ರವರಿ 24ರಂದು ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಯಿತು. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಉದ್ಘಾಟನಾ ಸಮಾರಂಭದಲ್ಲಿ ಈ ಹೆಸರನ್ನು ಇಡಲಾಗಿತ್ತು.

Comments

Leave a Reply

Your email address will not be published. Required fields are marked *