ಬೀದರ್‌, ಕಲಬುರಗಿಯಲ್ಲಿ ವರುಣನ ಅಬ್ಬರ – ಗ್ರಾಮಗಳು ಜಲಾವೃತ, ಸೇತುವೆಗಳು ಮುಳುಗಡೆ

– ಉಕ್ಕಿ ಹರಿಯುತ್ತಿರೋ ಜೀವನದಿ ಮಾಂಜ್ರಾ

ಬೀದರ್/ಕಲಬುರಗಿ: ಮಹಾಮಳೆಗೆ ಬೀದರ್ ಜಿಲ್ಲೆಯಾದ್ಯಂತ ಹಲವು ಗ್ರಾಮಗಳು ಜಲಾವೃತವಾಗಿದ್ದು, ಸೇತುವೆಗಳು ಮುಳುಗಡೆಯಾಗಿ ಪ್ರವಾಹ ಸೃಷ್ಟಿಯಾಗಿದೆ. ಇಷ್ಟು ದಿನ ನೀರು ಇಲ್ಲದೆ ಖಾಲಿ ಖಾಲಿಯಾಗಿದ್ದ ಜಿಲ್ಲೆಯ ಜೀವನದಿ ಮಾಂಜ್ರಾ ಉಕ್ಕಿ ಹರಿಯುತ್ತಿದೆ. ಸತತ ಸುರಿದ ಮಹಾಮಳೆಗೆ ಬೀದರ್ ಪಟ್ಟಣದ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗಿವೆ.

ಬೀದರಿನಲ್ಲಿ ಸತತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಬಸವಕಲ್ಯಾಣ, ಭಾಲ್ಕಿ, ಕಮಲಾನಗರ, ಹುಮ್ನಾಬಾದ್ ಸೇರಿದಂತೆ ಜಿಲ್ಲೆಯಾದ್ಯಂತ ಅವಾಂತರಗಳು ಎದುರಾಗಿವೆ. ಬಸವಕಲ್ಯಾಣ ತಾಲೂಕಿನ ಸಿರಗಾಪೂರ್ ಗ್ರಾಮದ ಬಳಿರುವ ಸೇತುವೆ ಮುಳುಗಡೆಯಾಗಿ ಸಿರಗಾಪೂರ್ ಟು ಕೋಹಿನೂರು ಸಂಪರ್ಕ ಕಡಿತವಾಗಿದೆ. ಸಿರಗಾಪೂರ್ ಕೆರೆ ತುಂಬಿ ರಸ್ತೆ ಮೇಲೆ ನೀರು ಹರಿದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಭಾಲ್ಕಿ ತಾಲೂಕಿನ ಉಚ್ಛ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಗ್ರಾಮದ ಹನುಮಾನ್ ದೇವಸ್ಥಾನ ಹಾಗೂ ರಸ್ತೆಗಳು ಕರೆಯಂತಾಗಿವೆ. ಭಾಲ್ಕಿ ಹಾಗೂ ಔರಾದ್ ತಾಲೂಕಿನ ಮಾಂಜ್ರಾ ನದಿಯ ದಡದಲ್ಲಿರುವ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಜಿಲ್ಲೆಯಾದ್ಯಂತ ಸೋಯಾ, ಉದ್ದು, ತೊಗರಿ, ಕಬ್ಬು, ಜೋಳ ಸೇರಿದಂತೆ ಸಾವಿರಾರು ಎಕರೆಯ ಬೆಳೆಗಳು ಮಹಾಮಳೆಗೆ ನಾಶವಾಗಿದೆ.

ಇನ್ನೂ ಕಲಬುರಗಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಕಾಗಿಣಾ ನದಿ ಅಪಾಯದ ಮಟ್ಟ ಮೀರಿ ಹರಿದ ಹಿನ್ನೆಲೆ ಉತ್ತರಾದಿ ಮಠಕ್ಕೆ ನೀರು ನುಗ್ಗಿದೆ. ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆದ ನಂತರ ಇದೀಗ ಕಲಬುರಗಿಯಲ್ಲಿ ಮಳೆಯ ಆರ್ಭಟ ಶುರುವಾಗಿದ್ದು, ಕೇವಲ ಎರಡು ದಿನಗಳ ಕಾಲ ಸುರಿದ ಧಾರಾಕಾರ ಮಳೆಗೆ ಕಲಬುರಗಿ ಜಿಲ್ಲೆಯ ಚಿಂಚೋಳಿ, ಸೇಡಂ ಹಾಗೂ ಆಳಂದ ತಾಲೂಕಿನ ಜನ ಅಕ್ಷರಶಃ ನಲುಗಿ ಹೋಗಿವೆ.

ಕಾಗಿಣಾ ನದಿ ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದ್ದು, ಮಳಖೇಡ ಸೇತುವೆ ಸಂಪೂರ್ಣ ಜಲಾವೃತಗೊಂಡು ವಾಘ್ದಾರಿ ಟೂ ರಿಬ್ಬನಪಲ್ಲಿ ರಾಜ್ಯ ಹೆದ್ದಾರಿಯ ಸಂಚಾರ ಸಂಪೂರ್ಣ ಬಂದ್ ಆಗಿದೆ. ನದಿಯ ಪಕ್ಕದಲ್ಲಿರುವ ಉತ್ತರಾದಿ ಮಠಕ್ಕೂ ನೀರು ನುಗ್ಗಿ ಇಡೀ ಮಠವೇ ಸಂಪೂರ್ಣ ಜಲಾವೃತಗೊಂಡಿದೆ. ಆಳಂದ ತಾಲೂಕಿನ ಸಾಲೆಗವ್ ಗ್ರಾಮದ ಹಳ್ಳದಲ್ಲಿ ಟ್ರ್ಯಾಕ್ಟರ್ ಪಲ್ಟಿ ಆಗಿದೆ. ಅದೃಷ್ಟವಶಾತ್ ಟ್ರ್ಯಾಕ್ಟರ್‌ನಲ್ಲಿದ್ದ 7 ಮಂದಿಯೂ ಈಜಿ ದಡ ಸೇರಿ ಬಚಾವ್ ಆಗಿದ್ದಾರೆ. ಚಿಂಚೋಳಿ ತಾಲೂಕಿನ 10ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ.

 

ಸದ್ಯ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಇನ್ನೆರಡು ದಿನ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನೂ ರಾಯಚೂರು ಮತ್ತು ಬಾಗಲಕೋಟೆಯಲ್ಲೂ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಪರಿಣಾಮ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.

Comments

Leave a Reply

Your email address will not be published. Required fields are marked *