ಮುಂದಿನ ಒಂದು ವರ್ಷದವರೆಗೆ ಕೊರೊನಾ ಇರುತ್ತೆ: ಶೆಟ್ಟರ್

ಧಾರವಾಡ: ಮುಂದಿನ ಒಂದು ವರ್ಷದವರೆಗೂ ಕೊರೊನಾ ಇರುತ್ತೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.

ಧಾರವಾಡದಲ್ಲಿ ಅಧಿಕಾರಿಗಳ ಸಭೆಯ ನಂತರ ಮಾತನಾಡಿದ ಅವರು, ಕೊರೊನಾ ಎಲ್ಲರಿಗೂ ಒಂದು ಹೊಸ ಅನುಭವ, ಒಂದು ತಿಂಗಳು, ಎರಡು ತಿಂಗಳಿಗೆ ಮುಗಿದು ಹೋಯ್ತು ಎನ್ನುವಂತಹದ್ದಲ್ಲ. ಇದು ನಿರಂತರವಾಗಿ ವರ್ಷಗಟ್ಟಲೇ ಇರುವಂತಹದ್ದು ಎಂದು ಹೇಳಿದರು.

ಕೆಲವು ಜನರಿಗೆ ಪಾಸಿಟಿವ್ ಬರುತ್ತಿರುತ್ತದೆ, ಅದೇ ರೀತಿ ಇನ್ನು ಕೆಲವರು ಡಿಸ್ಚಾರ್ಜ್ ಆಗತ್ತಿರುತ್ತಾರೆ. ಹೀಗೆ ನಿರಂತರವಾಗಿ ಪ್ರಕ್ರಿಯೆ ನಡೆಯುತ್ತಿರುತ್ತದೆ. ಹೀಗಾಗಿ ಆರ್ಥಿಕತೆಯನ್ನು ಹಂತ ಹಂತವಾಗಿ ರಿಲ್ಯಾಕ್ಸ್ ಮಾಡುತ್ತಿದ್ದೇವೆ. ಕೊರೊನಾ ವಿಚಾರವಾಗಿ ಜನರೇ ಸ್ವಯಂ ಪ್ರೇರಿತವಾಗಿ ಜಾಗೃತರಾಗಬೇಕು. ಕೇಂದ್ರ, ರಾಜ್ಯ ಸರ್ಕಾರದ ನಿರ್ದೇಶನವನ್ನು ಜನ ಪಾಲನೆ ಮಾಡಬೇಕು ಎಂದರು.

ಲಾಕ್‍ಡೌನ್ ಸಡಿಲಿಕೆ ಮಾಡಿದ ಬಳಿಕ ಮುಂಜಾಗ್ರತೆ ವಹಿಸಬೇಕು. ಧಾರವಾಡ ಕೊರೊನಾದಲ್ಲಿ ಜಿರೋ ಹಂತಕ್ಕೆ ಬಂದು ಬಿಟ್ಟಿತ್ತು. ಆದರೆ ಹೊರಗಿನಿಂದ ಬಂದವರಿಂದ ಮತ್ತೆ ಹೆಚ್ಚಾಗಿದೆ. ಸಮುದಾಯ ಹರಡುವಿಕೆ ನಮ್ಮಲ್ಲಿ ಆಗಿಲ್ಲ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *