ಮೀಸಲಾತಿ ಕೇಳುವುದು ತಪ್ಪಲ್ಲ, ಆದರೆ ಬೆದರಿಕೆ, ಒತ್ತಡ ಒಪ್ಪಲ್ಲ: ಈಶ್ವರಪ್ಪ

ಶಿವಮೊಗ್ಗ: ರಾಜ್ಯದಲ್ಲಿ ಅನೇಕ ಸಮುದಾಯಗಳ ಜನರು ಮೀಸಲಾತಿ ಬೇಕು ಎಂದು ಕೇಳುತ್ತಿದ್ದಾರೆ. ಆದರೆ ಮೀಸಲಾತಿಯನ್ನು ಇಷ್ಟು ದಿನದೊಳಗೆ ಕೊಡಬೇಕು ಎಂದು ಬೆದರಿಕೆ ಹಾಕುವುದು ಒತ್ತಡ ಹೇರುವುದನ್ನು ಒಪ್ಪುವುದಿಲ್ಲ ಎಂದು ಗ್ರಾಮೀಣ ಅಭಿವೃದ್ದಿ ಸಚಿವ ಈಶ್ವರಪ್ಪ ಹೇಳಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಯಾವ ಸಮಾಜಕ್ಕೆ ಮೀಸಲಾತಿ‌ ಪಡೆಯುವ ಅರ್ಹತೆ ಇರುತ್ತದೆಯೋ, ಆ ಅರ್ಹತೆಗೆ ತಕ್ಕಂತೆ ಮೀಸಲಾತಿ ಕೊಡಬೇಕು ಎಂಬ ಅಪೇಕ್ಷೆ ಅಂಬೇಡ್ಕರ್ ಅವರದ್ದಾಗಿತ್ತು ಎಂದರು.

ಇದೀಗ ರಾಜ್ಯದಲ್ಲಿ ಹಲವು ಸಮಾಜಗಳು ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿವೆ. ಸಮುದಾಯದ ಸ್ವಾಮೀಜಿಗಳು ಅದರ ನೇತೃತ್ವ ವಹಿಸಿರುವುದು ಸ್ವಾಗತಾರ್ಹ. ಆದರೆ ಇಂತಿಷ್ಟೇ ದಿನದಲ್ಲೇ ಕೊಡಬೇಕು ಎಂದು‌ ಆಗ್ರಹಿಸುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮೀಸಲಾತಿ ಬಗ್ಗೆ ಅಧ್ಯಯನ ನಡೆಸಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಜೊತೆಗೆ ಹಿಂದುಳಿದ ವರ್ಗದ ಆಯೋಗ ಸಹ ಮೀಸಲಾತಿ ಬಗ್ಗೆ ಅಧ್ಯಯನ ನಡೆಸಿ‌ ಮೀಸಲಾತಿ ಕೊಡಬೇಕೋ, ಬೇಡವಾ ಎಂಬ ಬಗ್ಗೆ ಸರಕಾರಕ್ಕೆ ಶಿಫಾರಸ್ಸು ಮಾಡಲಿದೆ. ಇದರ ನಂತರ ಮೀಸಲಾತಿ ನೀಡುವ ಬಗ್ಗೆ ಸರಕಾರ ಅಂತಿಮವಾಗಿ ನಿರ್ಧರಿಸುತ್ತದೆ. ಆದರೆ ಬೆದರಿಕೆ ಹಾಕಿದರು, ಒತ್ತಡ ಹೇರಿದರು‌ ಅಂತಾ ಮೀಸಲಾತಿ ನೀಡುವುದು ಸರಿಯಲ್ಲ ಎಂದು ಅವರು ತಿಳಿಸಿದರು.

ಯತ್ನಾಳ್ ಒಬ್ಬ ಪ್ರಖರ ಹಿಂದುತ್ವವಾದಿ. ಹಾಗಾಗಿ ಅವರ ಮೇಲೆ ಗೌರವವಿದೆ. ಆದರೆ ಮುಖ್ಯಮಂತ್ರಿ ಅವರ ಬಗ್ಗೆ ಹಾಗೂ ಅವರ ಕುಟುಂಬಸ್ಥರ ವಿರುದ್ದ ವಾಗ್ದಾಳಿ ನಡೆಸುವುದು ಸರಿಯಲ್ಲ. ಅವರಿಗೆ ಯಾವುದೇ ತೊಂದರೆ ಆಗಿದ್ದರೆ ಅದನ್ನು ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಬೇಕು. ಅದನ್ನು ಬಿಟ್ಟು ಹಾದಿ ಬೀದಿಯಲ್ಲಿ ನಿಂತು ಮಾತನಾಡುವುದು ಸರಿಯಾದ ಕ್ರಮವಲ್ಲ ಎಂದರು.

ಯತ್ನಾಳ್ ಅವರು ಪದೇ ಪದೇ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಕುಟುಂಬಸ್ಥರ ವಿರುದ್ದ ವಾಗ್ದಾಳಿ ನಡೆಸುತ್ತಿದ್ದರು. ಈಗಾಗಿ ರಾಜ್ಯ ಸಮಿತಿ‌ ಹೈಕಮಾಂಡ್‌ಗೆ ದೂರು ನೀಡಿತ್ತು. ಹಾಗೂ ನೋಟಿಸ್‌ ಸಹ ನೀಡಿತ್ತು. ಅದರ ಮೇರೆಗೆ ಹೈಕಮಾಂಡ್ ಅವರನ್ನು‌ ದೆಹಲಿಗೆ ಕರೆಯಿಸಿಕೊಂಡಿದೆ. ಅವರೇ ಹೇಳಿರುವ ಹಾಗೆ ನೋಟೀಸ್ ಗೆ 18 ಪುಟಗಳ ಉತ್ತರ ನೀಡಿರುವುದಾಗಿ ತಿಳಿಸಿದ್ದಾರೆ. ಹೈಕಮಾಂಡ್ ಈ ವಿಷಯದಲ್ಲಿ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಮುಂದೆ ನೋಡಬೇಕಿದೆ ಎಂದು ಈಶ್ವರಪ್ಪ ತಿಳಿಸಿದರು.

Comments

Leave a Reply

Your email address will not be published. Required fields are marked *