-ಕೊರೊನಾ ನಿಯಂತ್ರಣಕ್ಕೆ ಉಗ್ರವಾದ ಕ್ರಮ
ಬೆಂಗಳೂರು: ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ರೆ ಉಗ್ರವಾದ ಕ್ರಮ ತೆಗದುಕೊಳ್ಳಲಾಗುವುದು. ಗ್ರಾಮೀಣ ಭಾಗಗಳಲ್ಲಿ 500 ರೂ. ಮತ್ತು ನಗರ ಪ್ರದೇಶದಲ್ಲಿ 1 ಸಾವಿರ ದಂಡ ವಿಧಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೋವಿಡ್ ನಿಯಂತ್ರಣದ ಬಗ್ಗೆ ಸಭೆ ಮಾಡಲಾಗಿದ್ದು, ಹೆಚ್ಚು ಕೊರೊನಾ ಪೀಡಿತ ಜಿಲ್ಲೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಕೊರೊನಾ ಪ್ರಕರಣಗಳನ್ನು ತಗ್ಗಿಸಲು ಏನೆಲ್ಲ ತಂತ್ರ ಅನುಸರಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಕೊರೊನಾ ನಿಯಂತ್ರಣ ಜವಬ್ದಾರಿ ಕೇವಲ ಸರ್ಕಾರದ ಮೇಲಿಲ್ಲ. ಅದು ನಾಗರೀಕರ ಮೇಲೆಯೂ ಇದೆ. ಪದೇ ಪದೇ ಮಾಸ್ಕ್ ಧರಿಸಲೇಬೇಕು. ಮಾಸ್ಕ್ ಬಳಸಲು ಚಿತ್ರ ನಟರು, ರಾಜಕಾರಣಿಗಳು, ಸ್ವಾಮೀಜಿಗಳನ್ನ ಬಳಸಿಕೊಂಡು ಜಾಗೃತಿ ಅಭಿಯಾನ ಮಾಡಲಾಗುವುದು ಎಂದು ತಿಳಿಸಿದರು.

ಉಗ್ರವಾದ ಕ್ರಮ: ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಆಂತರ ಮಾಯವಾಗಿದೆ. ಜನರು ಸಹ ಮಾಸ್ಕ್ ಧರಿಸೋದನ್ನು ಮರೆಯುತ್ತಿದ್ದಾರೆ. ಅಂಗಡಿ, ಮಾಲ್, ಮಾರ್ಕೆಟ್ ಗಳಲ್ಲಿ ಜನ ನಿಯಮ ಉಲ್ಲಂಘಿಸಿದ್ರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ಅಂಗಡಿ ಮಾಲೀಕರು ಸಹ ಗ್ರಾಹಕರ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನಗರ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದವರಿಗೆ 1 ಸಾವಿರ ರೂ. ಮತ್ತು ಗ್ರಾಮೀಣ ಭಾಗದಲ್ಲಿ 500 ರೂ. ದಂಡ ಹಾಕಲು ನಿರ್ಧರಿಸಲಾಗಿದೆ ಎಂದರು.

ಕೊರೊನಾ ನಿಯಂತ್ರಣಕ್ಕೆ ಬರದಿದ್ದರೆ ಲಾಕ್‍ಡೌನ್ ಅನಿವಾರ್ಯವಾಗಲಿದೆ ಎಂದು ಕೇರಳ ಸಿಎಂ ಹೇಳಿದ್ದಾರೆ. ನಮ್ಮಲ್ಲೂ ಅಂತಹ ಪರಿಸ್ಥಿತಿ ಬರುವುದು ಬೇಡ. ಮಾಸ್ಕ್, ಸಾಮಾಜಿಕ ಅಂತರ ಮತ್ತು ಪದೇ ಪದೇ ಕೈ ತೊಳೆದುಕೊಳ್ಳುವುದು ನಮ್ಮ ಬಳಿ ಸದ್ಯಕ್ಕೆ ಇರುವ ಮೂರು ಲಸಿಕೆ. ಆ ಮೂರನ್ನು ನಾವು ಬಳಸಿಕೊಳ್ಳಬೇಕು. ಒಟ್ಡು 15 ಜಿಲ್ಲೆಯಲ್ಲಿ ಕಳೆದ 15 ದಿನದಲ್ಲಿ ಶೇ.10 ರಷ್ಟು ಕೋವಿಡ್ ಪ್ರಮಾಣ ಹೆಚ್ಚಳವಾಗಿದೆ. ರಾಜ್ಯದಲ್ಲಿ 73,599 ಬೆಡ್ ಗಳ ವ್ಯವಸ್ಥೆ ಇದೆ. ಇವುಗಳಲ್ಲಿ 11,892 ಐಸಿಯು ಮತ್ತು 2,715 ವೆಂಟಿಲೇಟರ್ ಬೆಡ್ ಗಳಿವೆ. ನನ್ನ ಆರೋಗ್ಯ ನನ್ನ ಹೊಣೆ ಅನ್ನೋ ತೀರ್ಮಾನಕ್ಕೆ ಜನ ಬಂದರೆ ಒಳ್ಳೆಯದು ಎಂದು ಸಚಿವರು ತಿಳಿಸಿದರು.

ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಹೊಸ ನಿಯಮಗಳು:
* ಮದುವೆ ಸಮಾರಂಭದಲ್ಲಿ ಗರಿಷ್ಠ 50 ಜನಕ್ಕೆ ಮಾತ್ರ ಅವಕಾಶ
* ಸರ್ಕಾರಿ ಕಚೇರಿಗಳಲ್ಲಿ ಮಾಸ್ಕ್ ಕಡ್ಡಾಯ. (ಮಾಸ್ಕ್ ಇಲ್ಲದಿದ್ರೆ ನೋ ಎಂಟ್ರಿ)
* ಒಂದು ದಿನಕ್ಕೆ ಕನಿಷ್ಠ 1 ಲಕ್ಷ ಕೊರೊನಾ ಟೆಸ್ಟ್
* ಸಾರಿಗೆ ವ್ಯವಸ್ಥೆಯಲ್ಲಿ ಶೇ.50 ಮಾತ್ರ ಸಂಚಾರಕ್ಕೆ ಅವಕಾಶ
* ಸಾರಿಗೆ ವಾಹನಗಳಲ್ಲಿ ಎಲ್ಲರಿಗೂ ಮಾಸ್ಕ್ ಕಡ್ಡಾಯ
* ಸಾರ್ವಜನಿಕವಾಗಿ 5 ಜನರಿಗಿಂತ ಹೆಚ್ಚು ಜನ ಸೇರದಂತೆ ಕ್ರಮ

Leave a Reply