ಮಾಸ್ಕ್ ಧರಿಸದಿದ್ದಕ್ಕೆ ಪ್ರಯಾಣಿಕನನ್ನು ಬಸ್ ನಿಂದ ಇಳಿಸಿದ ನಿರ್ವಾಹಕ

ಮಡಿಕೇರಿ: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಧರಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದವರಿಗೆ ದಂಡವನ್ನೂ ಕೂಡ ವಿಧಿಸಲಾಗುತ್ತಿದೆ. ಆದರೆ ಸರ್ಕಾರಿ ಬಸ್ ನಲ್ಲಿ ಮಾಸ್ಕ್ ಧರಿಸದೇ ಹತ್ತಿದ ವ್ಯಕ್ತಿಯನ್ನು ನಡುರಸ್ತೆಯಲ್ಲಿಯೇ ಕೆಳಗೆ ಇಳಿಸಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ಸುಂಟಿಕೋಪ್ಪ ಮಡಿಕೇರಿ ಮಾರ್ಗಮದ್ಯೆ ನಡೆದಿದೆ.

ಬೆಳಗ್ಗೆ ಸುಂಟಿಕೊಪ್ಪದಿಂದ ವ್ಯಕ್ತಿಯೋರ್ವ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನೇರಿದ್ದಾರೆ. ಆದರೆ ವ್ಯಕ್ತಿ ಮಾಸ್ಕ್ ಧರಿಸದೇ ಇರೋದನ್ನು ಗಮನಿಸಿದ ಕಂಡಕ್ಟರ್ ಟಿಕೆಟ್ ನೀಡಲು ನಿರಾಕರಿಸಿ ಬಸ್ ನಿಂದ ಇಳಿಯುವಂತೆ ತಾಕೀತು ಮಾಡಿದ್ದಾರೆ. ಕಂಡಕ್ಟರ್ ಗೆ ಸಹ ಪ್ರಯಾಣಿಕರು ಸಾಥ್ ನೀಡಿದ್ದಾರೆ. ಏನೇನೋ ಸಾಬೂಬು ನೀಡಲು ಮುಂದಾದ ಮಾಸ್ಕ್ ಧರಿಸದ ಪ್ರಯಾಣಿಕನ ಮಾತನ್ನು ಒಪ್ಪದ ಕಂಡಕ್ಟರ್ ಮತ್ತು ಡ್ರೈವರ್ ಮಾರ್ಗ ಮಧ್ಯೆ ಸುಂಟಿಕೋಪ್ಪ ಕೆ.ಇ.ಬಿ. ಬಳಿ ಇಳಿಸಿದ್ದಾರೆ. ಅಲ್ಲದೇ ಇನ್ನು ಮುಂದಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿ ಹೇಳಿದ್ದಾರೆ.

ಮಾಸ್ಕ್ ಇಲ್ಲದ ಕಾರಣ ತನ್ನ ಪ್ರಯಾಣ ಅರ್ಧಕ್ಕೆ ಮೊಟಕುಗೊಂಡಿದ್ದರಿಂದ ಕೋಪಗೊಂಡ ಪ್ರಯಾಣಿಕ ಕೊರೊನಾ ವೈರಸ್ ಅನ್ನು ಶಪಿಸಿಕೊಂಡು ಮುಂದಿನ ಪ್ರಯಾಣಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಯಿತು. ಒಟ್ಟಿನಲ್ಲಿ ಮಾಸ್ಕ್ ಧರಿಸದೇ ಉದ್ಧಟತನ ತೋರುವವರಿಗೆ ಈ ಪ್ರಕರಣವೊಂದು ಪಾಠವಾಗಿದೆ.

Comments

Leave a Reply

Your email address will not be published. Required fields are marked *