ಮಾಸ್ಕ್ ಇಲ್ಲದೆ ರಸ್ತೆಗಿಳಿದವರಿಗೆ ಬಿತ್ತು ಭರ್ಜರಿ ದಂಡ

ರಾಯಚೂರು: ಮಾಸ್ಕ್ ಹಾಕದೇ ರಸ್ತೆಗಿಳಿದವರಿಗೆ ರಾಯಚೂರಲ್ಲಿ ಇಂದು ಪೊಲೀಸರು ಶಾಕ್ ಟ್ರೀಟ್‍ಮೆಂಟ್ ನೀಡಿದ್ದಾರೆ.

ಕೊರೊನಾ ನಿಯಂತ್ರಣ ನಿಯಮಗಳನ್ನು ಮರೆತು, ಮಾಸ್ಕ್ ಇಲ್ಲದೆ ಮನೆಯಿಂದ ಹೊರಬಂದವರಿಗೆ ದಿಢೀರನೆ ದಂಡ ಹಾಕಿ ಪೊಲೀಸರು ಶಾಕ್ ನೀಡುತ್ತಿದ್ದಾರೆ. ಇಷ್ಟು ದಿನ ಮಾಸ್ಕ್ ಮರೆತು ಓಡಾಡುತ್ತಿದ್ದ ಜನರಿಗೆ ದಂಡದ ರುಚಿ ತೋರಿಸುತ್ತಿದ್ದಾರೆ. ಮಾಸ್ಕ್ ಇಲ್ಲದೇ ಹೊರ ಬಂದವರಿಗೆ 200 ರೂ. ದಂಡ ಹಾಕಿದ್ದಾರೆ.

ಜಿಲ್ಲಾ ಉಸ್ತುವಾರಿ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮಂಗಳವಾರ ಸಭೆಯಲ್ಲಿ ನೀಡಿದ ಸೂಚನೆ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ. ನಗರದ ಜಿಲ್ಲಾಪಂಚಾಯ್ತಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾಸ್ಕ್ ಬಗ್ಗೆ ಗಂಭೀರ ಚರ್ಚೆಯಾಗಿತ್ತು. ಕೋವಿಡ್ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಸಚಿವ ಲಕ್ಷ್ಮಣ್ ಸವದಿ ಅವರ ಸೂಚನೆಯ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಜೊತೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮಾಸ್ಕ್ ಧರಿಸಿ ಓಡಾಡುವಂತೆ ಪೊಲೀಸ್ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *