ಮಾಸ್ಕ್‌ ಧರಿಸದೇ ಎಂಟ್ರಿ – ಪ್ರಶ್ನಿಸಿದ್ದಕ್ಕೆ ಕಂಪ್ಯೂಟರ್‌ ಎತ್ತಿ, ಪೀಠೋಪಕರಣ ಧ್ವಂಸ

– ನಾನು ಮಾಸ್ಕ್‌ ಖರೀದಿಸಲ್ಲ
– ಪಂಚಾಯತ್‌ ಮಾಸ್ಕ್‌ ನೀಡಲಿ

ಹಾಸನ: ಪಾನಮತ್ತ ವ್ಯಕ್ತಿಯೊಬ್ಬ ಮಾಸ್ಕ್ ಧರಿಸದೆ ಗ್ರಾಮ ಪಂಚಾಯಿತಿಗೆ ನುಗ್ಗಿ ಅಲ್ಲಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ ಆತಂಕ ಸೃಷ್ಟಿ ಮಾಡಿದ ಘಟನೆ ಹಾಸನ ಜಿಲ್ಲೆಯ, ಸಕಲೇಶಪುರ ತಾಲೂಕಿನಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ.

ಗುರುವಾರ ಬ್ಯಾಕರವಳ್ಳಿ ಗ್ರಾಮ ಪಂಚಾಯತಿಗೆ ನುಗ್ಗಿದ ಹರೀಶ್, ನನಗೆ ಹೆಲ್ತ್ ಕಾರ್ಡ್ ಮಾಡಿಕೊಡಬೇಕು ಎಂದು ಸಿಬ್ಬಂದಿಗೆ ಜೋರು ದನಿಯಲ್ಲಿ ಕೇಳಿದ್ದಾನೆ. ಆಗ ಸಿಬ್ಬಂದಿ ಹಿರಿಯ ಅಧಿಕಾರಿಗಳು ಹೊರಗೆ ಹೋಗಿದ್ದಾರೆ ಅವರು ಬಂದ ನಂತರ ಮಾತನಾಡಿ ಎಂದು ಹೇಳಿದ್ದಾರೆ. ಇದಕ್ಕೆ ಸುಮ್ಮನಾಗದ ಹರೀಶ್ ಅವಾಚ್ಯ ಪದಗಳಿಂದ ನಿಂದಿಸುತ್ತಾ, ಕಚೇರಿಯಲ್ಲಿದ್ದ ಕಂಪ್ಯೂಟರ್ ಮೇಲಕ್ಕೆತ್ತಿ ಎಸೆಯುವ ಪ್ರಯತ್ನ ಮಾಡಿದ್ದಾನೆ.

ಈ ಸಂದರ್ಭದಲ್ಲಿ ಅಲ್ಲೇ ಇದ್ದ ಇಬ್ಬರು ಸಿಬ್ಬಂದಿ ಆತನನ್ನು ಸಮಾಧಾನಪಡಿಸಿ ಕುರ್ಚಿಯ ಮೇಲೆ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ನಂತರ ಬಂದ ಅಧಿಕಾರಿಗಳು ಮಾಸ್ಕ್ ಧರಿಸದೆ ಇದ್ದದ್ದಕ್ಕೆ ಆತನಿಗೆ ಬುದ್ಧಿವಾದವನ್ನು ಹೇಳಿ ನಿಮ್ಮ ಸೇವೆಗೆ ನಾವಿರುವುದು. ಹೆಲ್ತ್ ಕಾರ್ಡ್ ಆಗಲಿ ಮತ್ತೊಂದಾಗಲಿ ಮಾಡಿಕೊಡುತ್ತೇವೆ. ಅರ್ಜಿಯನ್ನು ಸಲ್ಲಿಸಿ ಎಂದು ಹರೀಶ್ ನ ಬಳಿ ಮನವಿ ಮಾಡಿಕೊಂಡಿದ್ದಾರೆ.

ಕುಪಿತಗೊಂಡ ಹರೀಶ್ ಕಾರ್ಯದರ್ಶಿಯ ನಿಂಗಯ್ಯ ಅವರಿಗೆ ಮಾಸ್ಕ್ ಗಳನ್ನು ನಾವು ತೆಗೆದುಕೊಳ್ಳುವುದಿಲ್ಲ ಪಂಚಾಯತಿಯಿಂದಲೇ ಕೊಡಬೇಕು ಎಂದು ಗಲಾಟೆ ಮಾಡಿದ್ದಾನೆ. ಘಟನೆ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

Comments

Leave a Reply

Your email address will not be published. Required fields are marked *