ಮಾರಮ್ಮನ ಪ್ರಸಾದ ಸೇವನೆಯಿಂದ 70 ಜನ ಅಸ್ವಸ್ಥ

ಮಂಡ್ಯ: ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ವಿಷಪ್ರಸಾದ ದುರಂತ ಪ್ರಕರಣ ಮಾಸುವ ಮುನ್ನವೇ ಇದೀಗ ಮಂಡ್ಯದಲ್ಲೂ ಮಾರಮ್ಮನ ಪ್ರಸಾದ ಸ್ವೀಕರಿಸಿದ ಭಕ್ತರು ಅಸ್ವಸ್ಥರಾಗಿದ್ದಾರೆ.ಪ್ರಸಾದ ಸೇವನೆ ಬಳಿಕ ಗ್ರಾಮದ 60ಕ್ಕೂ ಹೆಚ್ಚು ಮಂದಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ.

ಜಿಲ್ಲೆಯ ಮಳವಳ್ಳಿ ತಾಲೂಕಿನ ಲಿಂಗಪಟ್ಟಣದಲ್ಲಿ ಮಾರಮ್ಮ ದೇವಾಲಯದ ಪ್ರಸಾದ ಸೇವಿಸಿದ 60 ಮಂದಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. 60 ಜನರ ಪೈಕಿ ಐವರು ತೀವ್ರ ಸುಸ್ತಿನಿಂದ ಬಳಲಿದ್ದು. ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯಾಧಿಕಾರಿಗಳು ಗ್ರಾಮದಲ್ಲೇ ಟಿಕಾಣಿ ಹೂಡಿ ಅಸ್ವಸ್ಥರಿಗೆ ಚಿಕಿತ್ಸೆ ನೀಡ್ತಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಲಿಂಗಪಟ್ಟಣ ಗ್ರಾಮದ ಡಾ.ಮಲ್ಲೇಶ್ ಗ್ರಾಮದೇವತೆ ಮಾರಮ್ಮನ ಹರಕೆ ತೀರಿಸಲು ಪೂಜೆ ಹಮ್ಮಿಕೊಂಡಿದ್ದರು. ಇಂದು ತಮ್ಮನ ಮದುವೆಯಿದ್ದ ಕಾರಣ ನೆನ್ನೆಯೇ ದೇವರಿಗೆ ಪ್ರಬಾಳೆ ಉಡುಗೊರೆ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದ ಮಲ್ಲೇಶ್, 200ಜನರಿಗೆ ಪುಳಿಯೊಗೊರೆ ಪ್ರಸಾದ ಮಾಡಿಸಿದ್ದಾರೆ. ಪೂಜೆ ಬಳಿಕ ಅರ್ಚಕರು ಪ್ರಸಾದ ಹಂಚಿಸಿದ್ದು. ಗ್ರಾಮದ 60ಕ್ಕೂ ಹೆಚ್ಚು ಜನ ಪ್ರಸಾದ ಸ್ವೀಕರಿಸಿದ್ದಾರೆ. 10 ರಿಂದ 60 ವರ್ಷದ ವರೆಗಿನವರು ಪ್ರಸಾದ ಸೇವಿಸಿದ್ದು, ರಾತ್ರಿ ವೇಳೆಗೆ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿ-ಭೇದಿ ಶುರುವಾಗಿದೆ. ತಕ್ಷಣವೇ 25ಮಂದಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಸ್ವಸ್ಥರೆಲ್ಲರೂ ಒಂದೇ ಗ್ರಾಮದವರಾಗಿದ್ದರಿಂದ ಎಚ್ಚೆತ್ತ ಆರೋಗ್ಯ ಇಲಾಖೆ ತಕ್ಷಣವೇ ಗ್ರಾಮದಲ್ಲಿ ಕ್ಯಾಂಪ್ ಹಾಕಿದೆ. ಬಳಿಕ ಪ್ರಸಾದ ಸ್ವೀಕರಿಸಿದವರೆಲ್ಲರನ್ನು ತಪಾಸಣೆಗೊಳಪಡಿಸಿದ್ದು. ಎಲ್ಲರಿಗೂ ಸ್ಥಳದಲ್ಲೇ ಚಿಕಿತ್ಸೆ ನೀಡಿದ್ದಾರೆ. ತೀವ್ರ ಸುಸ್ತಿನಿಂದ ಬಳಲುತ್ತಿದ್ದ ಐವರನ್ನು ತಾಲೂಕು ಆಸ್ಪತ್ರೆಗೆ ರವಾನಿಸಿದ್ದು, ಪ್ರಸಾದದ ಸ್ಯಾಂಪಲ್ ಟೆಸ್ಟ್ ಗೆ ಕಳುಹಿಸಲಾಗಿದೆ. ಫುಡ್ ಪಾಯ್ಸನ್ ನಿಂದ ಈ ಘಟನೆ ನಡೆದಿರಬಹುದು ಎಂದು ಡಿಎಚ್‍ಒ ಹೇಳಿದ್ದಾರೆ.

ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಬಚಾವ್ ಆಗಿದ್ದು. ಘಟನೆಯಿಂದ ಆತಂಕಗೊಂಡಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ಮಂಡ್ಯ ಎಸ್‍ಪಿ ಪರಶುರಾಮ್, ಯಾರಾದರೂ ಈ ಬಗ್ಗೆ ದೂರು ನೀಡಿದರೆ ತನಿಖೆ ಮಾಡೋದಾಗಿ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಈ ಪ್ರಕರಣ ಫುಡ್‍ಪಾಯ್ಸನ್ ಎನಿಸಿದ್ದು. ಪ್ರಸಾದದ ಸ್ಯಾಂಪಲ್ ಟೆಸ್ಟ್ ಬಂದ ಬಳಿಕವೇ ಅಸಲಿ ಕಾರಣ ಹೊರಬೀಳಬೇಕಿದೆ.

Comments

Leave a Reply

Your email address will not be published. Required fields are marked *