ಮಾಧ್ಯಮಗಳಿಂದ ತೇಜೋವಧೆ – ದೆಹಲಿ ಹೈಕೋರ್ಟ್‌ ಮೊರೆ ಹೋದ ರಾಕುಲ್‌

ನವದೆಹಲಿ: ಬಾಲಿವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ತನ್ನ ಹೆಸರು ಪ್ರಕಟಣೆಗೆ ತಡೆ ನೀಡಬೇಕೆಂದು ಕೋರಿ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಮಾಧ್ಯಮಗಳು ರಿಯಾ ಚಕ್ರವರ್ತಿ ಹೇಳಿಕೆಯನ್ನು ಆಧಾರಿಸಿ ಡ್ರಗ್ಸ್‌ ಪ್ರಕರಣದಲ್ಲಿ ತನ್ನ ಕಕ್ಷಿದಾರರ  ಹೆಸರನ್ನು ಪ್ರಕಟಿಸುತ್ತಿವೆ. ಈ ರೀತಿ ಸುದ್ದಿ ಪ್ರಸಾರ ಮಾಡುತ್ತಿರುವುದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ. ಹೀಗಾಗಿ ನ್ಯಾಯಾಲಯ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಕುಲ್‌ ಪರ ವಕೀಲರು ಮನವಿ ಮಾಡಿದ್ದಾರೆ.

ನ್ಯಾ.ನವೀನ್‌ ಚಾವ್ಲಾ ಅವರಿದ್ದ ಏಕಸದಸ್ಯ ಪೀಠದಲ್ಲಿ ಇಂದು ರಾಕುಲ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು. ರಾಕುಲ್‌ ಪರ ವಕೀಲರು, ಡ್ರಗ್ಸ್‌ ಪ್ರಕರಣದಲ್ಲಿ ರಾಕುಲ್‌ಗೆ ಸಂಬಂಧವಿದೆ ಎಂದು ದುರುದ್ದೇಶಪೂರ್ವಕವಾಗಿ ಸುದ್ದಿ ಪ್ರಸಾರವಾಗಿದೆ. ಯಾವುದೋ ಫೋಟೋ, ವಿಡಿಯೋಗಳಿಗೆ ಡ್ರಗ್ಸ್‌ ಪ್ರಕರಣವನ್ನು ಜೋಡಿಸಿ ತೇಜೋವಧೆ ಮಾಡಲಾಗುತ್ತಿದೆ. ಇದು ಸಂವಿಧಾನ ಪರಿಚ್ಛೇದ 21ರ ಅಡಿ ಬರುವ ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ವಾದಿಸಿದರು.

ವಿಚಾರಣೆ ನಡೆಸಿದ ಕೋರ್ಟ್‌ ಕೇಂದ್ರ ಸರ್ಕಾರ, ಪ್ರಸಾರ ಭಾರತಿ, ಸುದ್ದಿ ಪ್ರಸಾರ ಸಂಘಕ್ಕೆ ನೋಟಿಸ್‌ ಜಾರಿ ಮಾಡಿ ವಿಚಾರಣೆಯನ್ನು ಅಕ್ಟೋಬರ್‌ 15ಕ್ಕೆ ಮುಂದೂಡಿದೆ.

ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ರಿಯಾ ಚಕ್ರವರ್ತಿಯನ್ನು ಬಂಧಿಸಿದೆ. ಈಕೆಯ ವಿಚಾರಣೆಯ ಸಂದರ್ಭದಲ್ಲಿ ರಾಕುಲ್‌ ಪ್ರೀತ್‌ ಸಿಂಗ್‌, ಸಾರಾ ಆಲಿಖಾನ್‌ ಸಹ ಡ್ರಗ್ಸ್‌ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾಳೆ ಎಂಬುದನ್ನು ಎನ್‌ಸಿಬಿ ಮೂಲಗಳನ್ನು ಆಧಾರಿಸಿ ಟೈಮ್ಸ್‌ ನೌ ವರದಿ ಮಾಡಿತ್ತು. ಒಟ್ಟು 25 ಕಲಾವಿದರ ಹೆಸರನ್ನು ರಿಯಾ ಹೇಳಿದ್ದಾಳೆ ಎನ್ನಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಎನ್‌ಸಿಬಿ ನಿರ್ದೇಶಕ ಕೆಪಿಎಸ್‌ ಮಲ್ಹೋತ್ರಾ, ಹಲವು ಹೆಸರುಗಳು ಬಂದಿದೆ. ಆದರೆ ತನಿಖೆಯ ಸಂದರ್ಭದಲ್ಲಿ ಹೆಸರುಗಳನ್ನು ಹೇಳುವುದಿಲ್ಲ ಎಂದು ತಿಳಿಸಿದ್ದರು.

Comments

Leave a Reply

Your email address will not be published. Required fields are marked *