ಸಚಿವ ಮಾಧುಸ್ವಾಮಿ ರಾ…ಹೇಳಿಕೆ – ಸಿಎಂ ಮೊದಲ ಪ್ರತಿಕ್ರಿಯೆ

– ಸಚಿವರಿಗೆ ವಾರ್ನ್ ಮಾಡಿದ್ದೇನೆ ಎಂದ ಬಿಎಸ್‍ವೈ

ಬೆಂಗಳೂರು: ಮಾಧುಸ್ವಾಮಿ ಹಾಗೆ ಮಾತನಾಡಿದ್ದು ಸರಿಯಲ್ಲ. ಮಾಧ್ಯಮಗಳಲ್ಲಿ ಸುದ್ದಿ ಗಮನಿಸಿದ್ದೇನೆ, ನಾನು ಅವರಿಗೆ ವಾರ್ನ್ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾನೂನು, ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋವಿಂದರಾಜ ನಗರ ಕ್ಷೇತ್ರದ ಹೊಸಳ್ಳಿ ಬಳಿ ನೂತನವಾಗಿ ನಿರ್ಮಿಸಿರುವ ಬಿಬಿಎಂಪಿ ರೆಫರಲ್ ಆಸ್ಪತ್ರೆ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಣ್ಣು ಮಗಳ ಬಗ್ಗೆ ಹೀಗೆ ಮಾತಾಡೋದು ಸರಿಯಲ್ಲ. ಆ ಹೆಣ್ಣು ಮಗಳನ್ನು ಕರೆದು ಮಾತನಾಡುತ್ತೇನೆ. ಮತ್ತೆ ಹೀಗೆ ಮಾತನಾಡಬೇಡಿ ಎಂದು ಸಚಿವರಿಗೆ ವಾರ್ನ್ ಮಾಡಿದ್ದೇನೆ ಎಂದರು.

ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡುವುದು ತಪ್ಪು. ಸಚಿವರಾಗಿ ಹೀಗೆ ಮಾತನಾಡುವುದು ಸರಿಯಲ್ಲ. ಮತ್ತೆ ಹೀಗೆಲ್ಲ ಮಾತನಾಡಕೂಡದು ಎಂದು ಸಚಿವರಿಗೆ ಎಚ್ಚರಿಕೆ ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ರಾಜೀನಾಮೆ ಪಡೆಯಬೇಕು ಎಂಬ ಕಾಂಗ್ರೆಸ್ ಆಗ್ರಹದ ಕುರಿತು ಪ್ರತಿಕ್ರಿಯೆ ನೀಡದೆ ಹಾಗೇ ಹೊರಟರು.

ಸಚಿವ ಮಾಧುಸ್ವಾಮಿ ಹೇಳಿದ್ದೇನು?
ಸಚಿವ ಮಾಧುಸ್ವಾಮಿ ಅವರು ರೈತ ಸಂಘದ ಕಾರ್ಯಕರ್ತರಿಗೆ `ಏಯ್ ಮುಚ್ಚು.. ಬಾಯಿ ರಾ?’ ಎಂದು ಹೇಳುವ ಮೂಲಕ ನಾಲಿಗೆ ಹರಿಬಿಟ್ಟಿದ್ದರು. ಕೆ.ಸಿ.ವ್ಯಾಲಿ ಸಂಬಂಧ ಕೆರೆಗಳ ವೀಕ್ಷಣೆಗೆ ಕೋಲಾರ ತಾಲೂಕಿನ ಎಸ್.ಅಗ್ರಹಾರ ಕರೆ ಬಳಿ ತೆರಳಿದ್ದರು. ಈ ವೇಳೆ ಕೆರೆಗಳ ಒತ್ತುವರಿ ತೆರವು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತೆಯರು ಮನವಿ ಮಾಡಲು ಮುಂದಾಗಿದ್ದರು. ಇದರಿಂದ ಸಿಡಿಮಿಡಿಗೊಂಡ ಮಾಧುಸ್ವಾಮಿಯವರು ಅವಾಚ್ಯ ಪದ ಬಳಕೆ ಮಾಡಿದ್ದರು.

ಕೋಪಗೊಂಡ ಕಾರ್ಯಕರ್ತೆ “ಅದೇನ್ ಅಣ್ಣ ನೀವು ಹಿಂಗ ಮಾತಾಡ್ತಾ ಇದ್ದೀರಾ? ಕರೆಕ್ಟ್ ಆಗಿ ಮಾತಾಡಿ. ನೀವು ಹೀಗೆ ಮಾತ್ನಾಡೋದು ಸರಿನಾ” ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಮಧ್ಯೆ ಪ್ರವೇಶಿಸಿ ದರ್ಪ ಮೆರೆದಿದ್ದರು.

ಕೋಲಾರಕ್ಕೆ ನೀರು ಸರಿಯಾಗಿ ಸಿಗುತ್ತಿಲ್ಲ ಎಂದು ದೂರು ನೀಡಲು ಬಂದಿದ್ದೇವೆ. ಸಮಾಧಾನದಿಂದ ಸಚಿವರಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ರೈತ ಸಂಘದ ಕಾರ್ಯಕರ್ತರು ಹೇಳಿದರೂ ಕ್ಯಾರೆ ಎನ್ನದ ಪೊಲೀಸ್ ಅಧಿಕಾರಿಯೊಬ್ಬರು, “ನಿನ್ನ ಮಾತು ಜಾಸ್ತಿಯಾತ್ತು, ಸಣ್ಣ ವಿಷಯವನ್ನು ಬೆಳೆಸುತ್ತಿದ್ದೀಯ” ಎಂದು ಕಾರ್ಯಕರ್ತೆಯೊಬ್ಬರನ್ನ ಹಿಂದಕ್ಕೆ ನೂಕಿ ದರ್ಪ ಮೆರೆದಿದ್ದರು. ಸಚಿವರ ಹಾಗೂ ಪೊಲೀಸರ ನಡೆಯ ಬಗ್ಗೆ ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದರು.

Comments

Leave a Reply

Your email address will not be published. Required fields are marked *