ಮಾದಕ ವಸ್ತು ಬಳಸುತ್ತಿದ್ದ ಯುವಕರಿಗೆ ಜಮಾತ್ ಕಮೀಟಿಯಿಂದ ನೋಟಿಸ್

ಮಡಿಕೇರಿ: ಮಾದಕ ವಸ್ತುಗಳ ದಂಧೆಯಲ್ಲಿ ತೊಡಗಿದ್ದ ಮುಸ್ಲಿಂ ಸಮುದಾಯದ ಇಬ್ಬರು ಯುವಕರಿಗೆ ಶಾಫಿ ಮುಸ್ಲಿಂ ಜಮಾತ್ ಕಮೀಟಿ ನೋಟಿಸ್ ನೀಡಿದೆ. ಈ ಮೂಲಕ ನಡವಳಿಕೆ ತಿದ್ದಿಕೊಳ್ಳುವಂತೆ ಎಚ್ವರಿಕೆ ನೀಡಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ನಿವಾಸಿ ಪಿ.ಆರ್.ನಿಸಾರ್ ಹಾಗೂ ಪಟೇಲ್ ನಗರದ ನಿವಾಸಿ ಜಮಾಲ್ ಜಮಾತ್‍ಗೆ ಸಂಘಟನೆ ನೋಟಿಸ್ ನೀಡಿದೆ. ಇಬ್ಬರೂ ಗಾಂಜಾ ವ್ಯಸನಿಗಳಾಗಿದ್ದು, ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಬಳಸುತ್ತಿದ್ದರು. ಅಲ್ಲದೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಕಮಿಟಿ ವತಿಯಿಂದ ಸಾಕಷ್ಟು ಬಾರಿ ತಿಳುವಳಿಕೆ ಹೇಳಿದ್ದರೂ ಕೇಳಿಲ್ಲ. ಮಾದಕ ವಸ್ತುಗಳನ್ನು ಉಪಯೋಗಿಸುವುದು, ಮಾರಾಟ ಮಾಡುವುದು ಮುಸ್ಲಿಂ ಧರ್ಮಕ್ಕೆ ವಿರೋಧ ಎನ್ನುವುದು ಗೊತ್ತಿದ್ದರೂ ಅವುಗಳ ಮಾರಾಟದಲ್ಲಿ ತೊಡಗಿರುವುದು ಕಮಿಟಿಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಮಾದಕ ವಸ್ತು ಮುಕ್ತ ಗೋಣಿಕೊಪ್ಪ ಮಾಡುವ ದೃಷ್ಟಿಯಿಂದ, ಯುವ ಪೀಳಿಗೆಯ ಭವಿಷ್ಯದ ಹಿತದೃಷ್ಟಿಯಿಂದ ಜಮಾತ್ ಕಮಿಟಿ ಎಚ್ಚರಿಕೆ ನೀಡಿದೆ. ಇಬ್ಬರ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಿದೆ. ಅಲ್ಲದೆ 40 ದಿನಗಳ ಕಾಲಾವಕಾಶ ನೀಡಿ ತಮ್ಮ ನಡವಳಿಕೆ ಬದಲಿಸುವಂತೆ ಸೂಚಿಸಲಾಗಿದೆ ಎಂದು ಸಂಘಟನೆಯ ಕಾರ್ಯದರ್ಶಿ ಹಕ್ಕಿಂ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *