ಮಾಜಿ ಮಹಿಳಾ ಕ್ರಿಕೆಟರ್ ತಾಯಿಯ ಚಿಕಿತ್ಸೆಗೆ ಕೊಹ್ಲಿ 6.77 ಲಕ್ಷ ಧನಸಹಾಯ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಮಾಜಿ ಮಹಿಳಾ ಕ್ರಿಕೆಟರ್ ಒಬ್ಬರ ತಾಯಿಯ ಚಿಕಿತ್ಸೆಗೆ 6.77 ಲಕ್ಷ ರೂ. ಧನಸಹಾಯ ಮಾಡಿದ್ದಾರೆ.

ಹೌದು. ಕೆಎಸ್ ಶ್ರಾವಂತಿ ನಾಯ್ಡು ಅವರ ತಾಯಿ ಎಸ್‍ಕೆ ಸುಮನ್ ಅವರು ಕೊರೊನಾ ಸೋಂನಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರ ಚಿಕಿತ್ಸೆಗೆ ಕೋಹ್ಲಿ 6.77 ಲಕ್ಷ ರೂ. ನೀಡಿದ್ದಾರೆ.

ಶ್ರಾವಂತಿ ಅವರ ತಾಯಿಗೆ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟು ಗಂಭೀರ ಸ್ಥಿತಿಯಲ್ಲಿದ್ದರು. ಈ ಹಿನ್ನೆಲೆಯಲ್ಲಿ ಶ್ರಾವಂತಿ ಅವರು, ಸಹಾಯ ಮಾಡುವಂತೆ ಬಿಸಿಸಿಐ ಮತ್ತು ಹೈದರಾಬಾದ್ ಕ್ರಿಕೆಟ್ ಸಂಸ್ಥೆಯನ್ನು ಮನವಿ ಮಾಡಿದ್ದರು. ಅಂತೆಯೇ ಇದೀಗ ಶ್ರಾವಂತಿ ಅವರು
ಬಿಸಿಸಿಐನ ದಕ್ಷಿಣ ವಿಭಾಗದ ಕನ್ವೇನರ್ (ಮಹಿಳಾ ಕ್ರಿಕೆಟ್) ಹಾಗೂ ಬಿಸಿಸಿಐನ ಮಾಜಿ ಅಧ್ಯಕ್ಷ ಎನ್ ಶಿವಲಾಲ್ ಯಾದವ್ ಅವರ ಸಹೋದರಿ ಎನ್ ವಿದ್ಯಾ ಯಾದವ್, ವಿರಾಟ್ ಕೊಹ್ಲಿಯನ್ನು ಟ್ಯಾಗ್ ಮಾಡಿ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.

ಶ್ರಾವಂತಿ ಭಾರತ ಮಹಿಳಾ ತಂಡದ ಪರ ಒಂದು ಟೆಸ್ಟ್ ಪಂದ್ಯವನ್ನಾಡಿದ್ದು, 4 ಒಡಿಐ ಮತ್ತು 6 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಎಡಗೈ ಸ್ಪಿನ್ನರ್ ಆಗಿರುವ ಶ್ರಾವಂತಿ, ಈಗಾಗಲೇ ತಮ್ಮ ತಾಯಿ ಸಲುವಾಗಿ 16 ಲಕ್ಷ ರೂ. ಖರ್ಚು ಮಾಡಿದ್ದಾರೆ. ಹೀಗಾಗಿ ಹೆಚ್ಚುವರಿ ನೆರವಿಗಾಗಿ ಮನವಿ ಮಾಡಿದ್ದರು.

ಈಗಾಗಲೇ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ದಂಪತಿ ಭಾರತದಲ್ಲಿ ಕೊರೊನಾ ವೈರಸ್ ವಿರುದ್ಧದ ಹೋರಾಟ ಸಲುವಾಗಿ ದತ್ತಿ ಸಂಗ್ರಹ ಮಾಡುತ್ತಿದ್ದು, ಇದಕ್ಕೆ ಖುದ್ದಾಗಿ 2 ಕೋಟಿ ರೂ. ನೀಡಿದ್ದಾರೆ. ಅಲ್ಲದೆ ಈವರೆಗೆ ಒಟ್ಟು 7 ಕೋಟಿ ರೂ. ಸಂಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *