ಮಹಿಳೆಯರ ಭಾವನೆಗೆ ಧಕ್ಕೆ – ಮಿಂತ್ರಾದಿಂದ ಲೋಗೋ ಬದಲಾವಣೆ

ಮುಂಬೈ: ಬಟ್ಟೆಗಳನ್ನು ಮಾರಾಟ ಮಾಡುತ್ತಿರುವ ಖ್ಯಾತ ಆನ್‌ಲೈನ್‌ ಶಾಪಿಂಗ್‌ ತಾಣ ಮಿಂತ್ರಾ ಮಹಿಳೆಯೊಬ್ಬರ ದೂರಿನ ಹಿನ್ನೆಲೆಯಲ್ಲಿ ತನ್ನ ಲೋಗೋವನ್ನು ಬದಲಾಯಿಸಿದೆ.

ಸರ್ಕಾರೇತರ ಸಂಸ್ಥೆ ಅವೆಸ್ಟಾ ಫೌಂಡೇಶನಿನ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ನಾಜ್​ ಪಟೇಲ್​ ಎಂಬುವವರು ಕಳೆದ ಡಿಸೆಂಬರ್​ನಲ್ಲಿ ಸೈಬರ್​ ಕ್ರೈಂ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಲೋಗೋ ಬದಲಾವಣೆ ಮಾಡದೇ ಇದ್ದರೆ ಮುಂಬೈ ಮೂಲದ ಕಂಪನಿ ವಿರುದ್ಧ ಕಾನೂನು ಸಮರ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು.

ಮಿಂತ್ರಾ ಲೋಗೋ ಬೆತ್ತಲೆ ಮಹಿಳೆಯಂತೆ ಹೋಲುತ್ತದೆ. ಇದರಿಂದ ಮಹಿಳೆಯರ ಭಾವನೆಗಳಿಗೆ ಧಕ್ಕೆ ಬರುತ್ತದೆ. ಆಕ್ಷೇಪಾರ್ಹ ರೀತಿಯಲ್ಲಿ ಇರುವುದು ಮಾತ್ರವಲ್ಲೇ ಅವಮಾನ ಮಾಡುವ ರೀತಿಯಲ್ಲಿದೆ ಎಂದು ದೂರು ನೀಡಿದ್ದರು. ಅಷ್ಟೇ ಅಲ್ಲದೇ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಕಂಪನಿ ವಿರುದ್ಧ ಅಭಿಯಾನವನ್ನು ಆರಂಭಿಸಿದ್ದರು.

ದೂರು ನೀಡಿದ ಬಳಿಕ ಲೋಗೋ ಆಕ್ಷೇಪಾರ್ಹ ರೀತಿಯಲ್ಲಿರುವುದನ್ನು ನಾವು ಮನಗಂಡೆವು. ಬಳಿಕ ಕಂಪನಿಗೆ ಇಮೇಲ್‌ ಮೂಲಕ ತಿಳಿಸಿದ್ದೆವು. ಈಗ ಲೋಗೋ ಬದಲಾವಣೆ ಮಾಡಿರುವುದಾಗಿ ಸೈಬರ್ ಕ್ರೈಮ್ ವಿಭಾಗದ ಡಿಸಿಪಿ ರಶ್ಮಿ ಕರಂಡಿಕರ್ ಪ್ರತಿಕ್ರಿಯಿಸಿದ್ದಾರೆ.

ಮಿತ್ರಾ ಸಭೆ ನಡೆಸಿ ಲೋಗೋ ಬದಲಾವಣೆಗೆ ಒಪ್ಪಿಗೆ ನೀಡಿದೆ. ವೆಬ್‌ಸೈಟ್‌, ಅಪ್ಲಿಕೇಶನ್‌, ಸಾಮಾಜಿಕ ಜಾಲತಾಣ ಅಲ್ಲದೇ ಮುಂದಿನ ದಿನಗಳಲ್ಲಿ ಪ್ಯಾಕೇಜಿಂಗ್‌ ಮತ್ತು ಪ್ರಿಂಟಿಂಗ್‌ ವಸ್ತುಗಳಲ್ಲಿ ಲೋಗೋ ಬದಲಾವಣೆ ಮಾಡಲಿದೆ ಎಂದು ವರದಿಯಾಗಿದೆ.

ಸದ್ಯ ಮಿಂತ್ರಾ ಲೋಗೋ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ಆಗುತ್ತಿದ್ದು, ನೆಟ್ಟಿಗರು ತಮ್ಮದೇ ಭಾವನೆಯನ್ನು ಬರೆದು ಟ್ವೀಟ್‌, ಪೋಸ್ಟ್‌ ಮಾಡುತ್ತಿದ್ದಾರೆ. ಈ ಸುದ್ದಿಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್‌ ಮಾಡಿ

Comments

Leave a Reply

Your email address will not be published. Required fields are marked *