‘ಮಹಾ’ ಪೊಲೀಸರಿಗೆ 25 ಸಾವಿರ ಫೇಸ್‍ಶೀಲ್ಡ್ ನೀಡಿದ ನಟ ಸೋನು ಸೂದ್

ಮುಂಬೈ: ಕೊರೊನಾ ಮಹಾಮಾರಿ ದೇಶವನ್ನು ಒಕ್ಕರಿಸಿದ ಬಳಿಕ ದಿನಬೆಳಗಾದರೆ ಸಾಕು ಅನೇಕ ಮಾನವೀಯ ಕಾರ್ಯಗಳು ಬೆಳಕಿಗೆ ಬರುತ್ತಲೇ ಇವೆ. ಅಂತೆಯೇ ಬಾಲಿವುಡ್ ನಟ ಸೋನು ಸೂದ್ ಕೂಡ ಲಾಕ್‍ಡೌನ್ ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಇತ್ತೀಚೆಗಷ್ಟೇ ಕೊರೊನಾ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದ ನಟ ಇದೀಗ ಮಹಾರಾಷ್ಟ್ರ ಪೊಲೀಸರ ಸಹಾಯಕ್ಕೆ ನಿಂತಿದ್ದಾರೆ.

ಹೌದು. ಮಹಾರಾಷ್ಟ್ರ ಪೊಲೀಸರಿಗೆ ಸುಮಾರು 25 ಸಾವಿರ ಫೇಸ್ ಶೀಲ್ಡ್ ನೀಡುವ ಮೂಲಕ ಸೋನು ಸೂದ್ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. ಈ ಸಂಬಂಧ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‍ಮುಖ್ ಅವರು ಟ್ವೀಟ್ ಮಾಡಿದ್ದು, ನಮ್ಮ ಪೊಲೀಸರಿಗೆ 25 ಸಾವಿರ ಫೇಸ್ ಶೀಲ್ಡ್ ನೀಡಿದ ನಟ ಸೊನು ಸೂದ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಬರೆದುಕೊಂಡು ಜೊತೆಗಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸಿಲುಕಿದ್ದ ನೂರಾರು ಕನ್ನಡಿಗರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ ಸೋನು ಸೂದ್

ಈ ಹಿಂದೆ ರಾಷ್ಟ್ರವ್ಯಾಪಿ ಲಾಕ್‍ಡೌನ್‍ನಿಂದಾಗಿ ಮೃತ ಮತ್ತು ಗಾಯಗೊಂಡಿರುವ ವಲಸೆ ಕಾರ್ಮಿಕರ 400ಕ್ಕೂ ಹೆಚ್ಚು ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದಾಗಿ ನಟ ಸೋನು ಸೂದ್ ಘೋಷಣೆ ಮಾಡಿದ್ದರು. ಈ ಸಂಬಂಧ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳ ಅಧಿಕಾರಿಗಳನ್ನು ಸಂಪರ್ಕಿಸಿ ಅವರೊಂದಿಗೆ ಮಾತುಕತೆ ಕೂಡ ನಡೆಸಿದ್ದರು. ಅಲ್ಲದೆ ಕೊರೊನಾದಿಂದ ಮೃತ ವಲಸಿಗರ ಸಂಬಂಧಿತ ಮಾಹಿತಿ, ವಿಳಾಸ ಮತ್ತು ಬ್ಯಾಂಕ್ ವಿವರಗಳನ್ನು ಪಡೆದುಕೊಂಡಿದ್ದರು. ಇದನ್ನೂ ಓದಿ: 400ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಕುಟುಂಬಗಳಿಗೆ ಸೋನು ಸೂದ್ ಆರ್ಥಿಕ ನೆರವು

ಮೃತ ಅಥವಾ ಗಾಯಗೊಂಡಿರುವ ವಲಸಿಗರ ಕುಟುಂಬಗಳಿಗೆ ಸುರಕ್ಷಿತ ಭವಿಷ್ಯವನ್ನು ಹೊಂದಲು ನಾನು ಅವರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇನೆ. ಅವರನ್ನು ಬೆಂಬಲಿಸುವುದು ನನ್ನ ವೈಯಕ್ತಿಕ ಜವಬ್ದಾರಿ ಎಂದು ನಾನು ಭಾವಿಸುತ್ತೇನೆ ಅಂತ ಸೋನು ಸೂದ್ ಹೇಳಿದ್ದರು.

Comments

Leave a Reply

Your email address will not be published. Required fields are marked *