ಮಹಾರಾಷ್ಟ್ರದಲ್ಲಿ ಕೊರೊನಾ ಮಹಾ ಸ್ಫೋಟ – ಒಂದೇ ದಿನ 31,855 ಮಂದಿಗೆ ಸೋಂಕು

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಮಹಾ ಸ್ಫೋಟಗೊಂಡಿದ್ದು ಕಳೆದ 24 ಗಂಟೆಯಲ್ಲಿ 31,855 ಕೊರೊನಾ ಪ್ರಕರಣ ಪತ್ತೆಯಾಗಿದೆ. 2020ರಲ್ಲಿ ಭಾರತಕ್ಕೆ ಕೊರೊನಾ ಬಂದ ನಂತರ ಮಹಾರಾಷ್ಟ್ರದಲ್ಲಿ ಒಂದೇ ದಿನ ಇಷ್ಟೊಂದು ಸೋಂಕು ಬಂದಿರುವುದು ಇದೇ ಮೊದಲು.

ಈ ಪೈಕಿ ಮುಂಬೈ ನಗರದಲ್ಲೇ 5,185 ಮಂದಿಗೆ ಸೋಂಕು ಬಂದಿದೆ. ಮುಂಬೈನಲ್ಲಿ 5 ಸಾವಿರಕ್ಕೂ ಅಧಿಕ ಸೋಂಕು ಇದೇ ಮೊದಲ ಬಾರಿಗೆ ದಾಖಲಾಗಿದೆ. ಒಂದು ದಿನದಲ್ಲಿ 95 ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಕೊರೊನಾ ನಿಯಮಗಳನ್ನು ಪಾಲನೆ ಮಾಡದೇ ಇದ್ದರೆ ಲಾಕ್‌ಡೌನ್‌ ಜಾರಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಒಟ್ಟು 25,64,881 ಮಂದಿಗೆ ಕೊರೊನಾ ಬಂದಿದ್ದು, ಈ ಪೈಕಿ 2,47,299 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚಾಗುತ್ತಿರುವ ಕಾರಣ ಒಂದು ಜಿಲ್ಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ.

ಬೀಡ್ ಜಿಲ್ಲೆಯಲ್ಲಿ ಮಾರ್ಚ್ 26ರಿಂದ ಏಪ್ರಿಲ್ 4ರವರೆಗೆ ಸರ್ಕಾರ ಲಾಕ್‍ಡೌನ್ ಘೋಷಣೆ ಮಾಡಿದೆ. ಈ ಅವಧಿಯಲ್ಲಿ ಎಲ್ಲಾ ಮದುವೆ ಹಾಲ್, ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳನ್ನು ಮುಚ್ಚಲಾಗುತ್ತದೆ.

ಲಾಕ್‌ಡೌನ್ ಸಂದರ್ಭದಲ್ಲಿ ಬೀಡ್ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳು, ಖಾಸಗಿ ಕಚೇರಿಗಳನ್ನು ಕೂಡ ಬಂದ್ ಮಾಡಲಾಗುತ್ತಿದ್ದು, ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಮೂಲಕ ಸಹಕರಿಸಬೇಕು ಎಂದು ಸೂಚಿಸಿದೆ. ದಿನಸಿ, ಹಾಲು ಮತ್ತು ಔಷಧಿಗಳನ್ನು ಒಳಗೊಂಡಂತೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಈ ಅವಧಿಯಲ್ಲಿ ವಿನಾಯಿತಿ ನೀಡಲಾಗುತ್ತದೆ.

Comments

Leave a Reply

Your email address will not be published. Required fields are marked *