ಮಹಾನ್‌ ನಾಯಕ ಸೇರಿದಂತೆ 9 ಮಂದಿ ವಿರುದ್ಧ ಶೀಘ್ರವೇ ಕೇಸ್‌ – ಬಾಲಚಂದ್ರ ಜಾರಕಿಹೊಳಿ

ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾನ್‌ ನಾಯಕ ಸೇರಿ 9 ಜನರನ್ನು ಜೈಲಿಗೆ ಕಳಿಸುವುದು ಗ್ಯಾರಂಟಿ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ರಾಜ್ಯಮಟ್ಟದ ಖಾಸಗಿ ಪತ್ತೆದಾರರ ಮೂಲಕ ಮಹತ್ವದ ಸಾಕ್ಷ್ಯಗಳನ್ನು ನಾವು ಕಲೆಹಾಕಿದ್ದೇವೆ. ಬೆಂಗಳೂರು, ಬೆಳಗಾವಿ, ಗೋಕಾಕ್ ಪೈಕಿ ಎಲ್ಲಿ ಕೇಸ್ ದಾಖಲಿಸಬೇಕು ಎನ್ನುವುದನ್ನು ನಾವು ಈಗ ಪ್ಲಾನ್‌ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕೇಸ್‌ ದಾಖಲಿಸುವ ಸಂಬಂಧ ದೆಹಲಿ ಮೂಲದ ಖ್ಯಾತ ವಕೀಲರು, ಕಾನೂನು ತಜ್ಞರ ಬಳಿ ಚರ್ಚೆ ನಡೆಸಲಾಗುತ್ತಿದೆ. ನಾಲ್ಕೈದು ದಿನಗಳಲ್ಲಿ ಆ ಒಂಭತ್ತು ಜನರ ವಿರುದ್ಧ ಕೇಸ್ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಮಹಾನ್‌ ನಾಯಕ ಯಾರು ಎಂದು ಪ್ರಶ್ನಿಸಿದ್ದಕ್ಕೆ, ಮಹಾನ್ ನಾಯಕ ಪಕ್ಷವೊಂದರ ನಾಯಕ ಅಂತಾ ಅಷ್ಟೇ ಹೇಳಬಹುದು. ಒಂಭತ್ತು ಜನರಲ್ಲಿ ಸಂತ್ರಸ್ತ ಯುವತಿ ಇಲ್ಲ. ತನಿಖೆ ಮುಂದುವರಿದ ಭಾಗವಾಗಿ ಯುವತಿ ಬರಲಿದ್ದಾಳೆ. ಪ್ರಕರಣದ ಮುಗಿಯುವ ತನಕ ಇಡೀ ಕುಟುಂಬ ರಮೇಶ್ ಜಾರಕಿಹೊಳಿ ಜೊತೆಗೆ ನಿಲ್ಲಲಿದೆ ಎಂದರು.

ರಮೇಶ್ ಜಾರಕಿಹೊಳಿ ನಿರಪರಾಧಿ ಆಗಿ ವಾಪಸ್‌ ಬರುತ್ತಾರೆ. ಸಿಎಂ ಕೂಡ ಮತ್ತೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಸಿಬಿಐ, ಸಿಐಡಿ, ಎಸ್‌ಐಟಿ ಸೇರಿದಂತೆ ಯಾವುದೇ ಸಂಸ್ಥೆಗೆ ಬೇಕಾದರೂ ಕೇಸ್ ವರ್ಗಾವಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *